- ಸೂಕ್ತ ಕ್ರಮಕ್ಕೆ ಹೆಗ್ಗೆರೆ ರಂಗಪ್ಪ ಒತ್ತಾಯ । 3 ಸಾವಿರಕ್ಕೂ ಅಧಿಕ ವೀರಶೈವ ಜಂಗಮರಿಂದ ಜಾತಿ ಕಾಲಂನಲ್ಲಿ ನಮೂದು: ಆರೋಪ
ಕನ್ನಡಪ್ರಭ ವಾರ್ತೆ, ದಾವಣಗೆರೆ
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮರ ಪೈಕಿ ಕೆಲವರು ತಮ್ಮ ಮಕ್ಕಳ ಜಾತಿಯನ್ನು ಬೇಡ ಜಂಗಮ ಎಂಬುದಾಗಿ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಪಾಲಕರು ಹೀಗೆ ಬರೆಸಿದ್ದಾರೆ. ಇದರಿಂದ ನಿಜವಾದ ದಲಿತರ ಮಕ್ಕಳಿಗೆ ಅನ್ಯಾಯ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಮುಖಂಡ ಹೆಗ್ಗೆರೆ ರಂಗಪ್ಪ ಒತ್ತಾಯಿಸಿದರು.ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಅನುಸಾರ ಜಿಲ್ಲೆಯಲ್ಲಿ ಯಾರೂ ಬೇಡ ಜಂಗಮರು ಇಲ್ಲ. ಆದರೂ, ವೀರಶೈವ ಜಂಗಮರು ಸಮಾಜದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ. ಜಾತಿ ಕಾಲಂನಲ್ಲಿ ಬೇಡ ಜಂಗಮ ಎಂಬುದಾಗಿ ದಾಖಲಿಸೋದು ತಡೆಯಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, 1ನೇ ತರಗತಿ ಪ್ರವೇಶದ ವೇಳೆ ಬೇಡ ಜಂಗಮ ಎಂಬುದಾಗಿ ಜಾತಿಯನ್ನು ವೀರಶೈವ ಜಂಗಮ ಸಮಾಜದ ಕೆಲವರು ಬರೆಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಜಾತಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸುವ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಡಿಡಿಪಿಐ ಮುಖಾಂತರ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೊನ್ನಾಳಿಯ ಜಿ.ಎಸ್. ತಮ್ಮಣ್ಣ ಜಾತಿ ನಿಂದನೆ ಪ್ರಕರಣದಲ್ಲಿ ದೂರು ದಾಖಲಿಸಿದ್ದರೂ, ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ದೂರಿದರು. ಅದಕ್ಕೆ ಎಸ್‌ಪಿ ಅವರು, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿ ಬೀಳುವ ಕಾರಣದಿಂದ ಶೇ,80-85 ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲ. ನ್ಯಾಯಾಲಯದಲ್ಲಿ ಸಾಕ್ಷಿಗಳು ವಿಚಾರಣೆ ಪೂರ್ಣಗೊಳ್ಳುವವರೆಗೂ ಸ್ಥಿರವಾಗಿದ್ದರೆ ಮಾತ್ರ ಶಿಕ್ಷೆ ಕೊಡಿಸಲು ಸಾಧ್ಯ ಎಂದರು.
ಚನ್ನಗಿರಿಯ ಚಿರಂಜೀವಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಬಿಡುಗಡೆ ಮಾಡುತ್ತಿದ್ದಾರೆ ಎಂದು ದೂರಿದರು. ದಲಿತ ಮುಖಂಡ ಸೂರ್ಯಪ್ರಕಾಶ ಮಾತನಾಡಿ, ದಾವಣಗೆರೆ ಮಹಾನಗರದ ಪರಿಶಿಷ್ಟರ ಕಾಲನಿಗಳಲ್ಲಿ ದಾವಣಗೆರೆ ಒನ್ ಕೇಂದ್ರ ಸೌಲಭ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
- - - -29ಕೆಡಿವಿಜಿ3, 4: