ಕರ್ತವ್ಯ ಮರೆತ ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ಅನ್ಯಾಯ: ಕೆ.ಎಸ್.ಆನಂದ್

KannadaprabhaNewsNetwork | Published : Apr 12, 2024 1:03 AM

ಸಾರಾಂಶ

ರಾಜ್ಯದಿಂದ ಸಂಸದರಾಗಿ ಆಯ್ಕೆಗೊಂಡ 25 ಬಿಜೆಪಿ ಸಂಸದರು ತಮ್ಮ ಕರ್ತವ್ಯ ಮರೆವ ಮೂಲಕ ಕರ್ನಾಟಕಕ್ಕೆ ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಆರೋಪ ಮಾಡಿದರು.

ಚೌಳಹಿರಿಯೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಚುನಾವಣಾ ಪ್ರಚಾರ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಿಂದ ಸಂಸದರಾಗಿ ಆಯ್ಕೆಗೊಂಡ 25 ಬಿಜೆಪಿ ಸಂಸದರು ತಮ್ಮ ಕರ್ತವ್ಯ ಮರೆವ ಮೂಲಕ ಕರ್ನಾಟಕಕ್ಕೆ ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಆರೋಪ ಮಾಡಿದರು.

ಗುರುವಾರ ಚೌಳಹಿರಿಯೂರು ಗ್ರಾಮದಲ್ಲಿ ಹಾಸನ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ್ಕೆ ಕೇಂದ್ರದಿಂದ 49 ಸಾವಿರ ಕೋಟಿ ಜಿಎಸ್‌ಟಿ ಪಾಲು ಬರಬೇಕಿದೆ. ಅದೇ ರೀತಿ ನೆಲ, ಜಲ ಮತ್ತು ಭಾಷೆ ವಿಚಾರ ಬಂದಾಗ ಕೂಡ ಸಂಸದರು ಮೌನ ವಹಿಸುತ್ತಾರೆ. ಕೇಂದ್ರ ನಾಯಕರ ಬಳಿ ಮಾತನಾಡುವ ಧೈರ್ಯ ಯಾವುದೇ ಬಿಜೆಪಿ ಸಂಸದರಿಗಿಲ್ಲ ಎಂದರು.ಸಂಸದ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಗೆದ್ದ ನಂತರ ಕಡೂರು ಕ್ಷೇತ್ರಕ್ಕೆ ಬರಲಿಲ್ಲ. ಸಂಸದರ ಕಾರ್ಯಾಲಯ ತೆರೆಯಲಿಲ್ಲ. ಕ್ಷೇತ್ರದ ಜನರ ಕಷ್ಟ,ಸುಖ ಕೇಳಲಿಲ್ಲ. ಕೇವಲ ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವರ ಮನಸ್ಥಿತಿ ಈ ರೀತಿ ಯಾಗಿರುತ್ತದೆ. ಮನೆ ಮಂದಿಯೆಲ್ಲ ಅಧಿಕಾರದಲ್ಲಿದ್ದರೂ ದೇವೇಗೌಡರ ಕುಟುಂಬಕ್ಕೆ ಅಧಿಕಾರದ ದಾಹ ತೀರುತ್ತಿಲ್ಲ ಎಂದು ಟೀಕಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಎಚ್.ಡಿ.ರೇವಣ್ಣನವರ ವಿರುದ್ಧ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇವಲ 2 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ. ಶ್ರೇಯಸ್ ಪಟೇಲ್ ಮತ್ತವರ ತಾಯಿ ಇಬ್ಬರೆ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಾರೆ ಎಂದರೆ ಅವರ ಆತ್ಮಸ್ಥೈ ರ್ಯ ಮೆಚ್ಚಬೇಕಿದೆ. ಅಂತಹ ಹೋರಾಟ ಮನೋಭಾವದ ಶ್ರೇಯಸ್ ಪಟೇಲ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಾಗಾಗಿ ಕ್ಷೇತ್ರದ ಜನತೆ ಶ್ರೇಯಸ್ ಪಟೇಲ್‌ಗೆ ಹೆಚ್ಚಿನ ಮತ ನೀಡಬೇಕು ಎಂದು ಕೋರಿದರು. ಪುರಸಭಾ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೆ ಪಕ್ಷದ ಸರಕಾರವಿದ್ದರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬರುತ್ತದೆ. ಕಡೂರನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಇದು ಸಹಕಾರಿ. ಹಾಸನ ಲೋಕಸಭೆ ಕ್ಷೇತ್ರ ದೊಡ್ಡ ಕ್ಷೇತ್ರವಾಗಿರುವುದರಿಂದ ಅಭ್ಯರ್ಥಿ ಪ್ರತಿ ಮನೆಗೆ ಬಂದು ಮತಯಾಚನೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭ್ಯರ್ಥಿ ಬರುವಿಕೆಗೆ ಕಾಯದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಕಾಂಗ್ರೆಸ್ ಮುಖಂಡರಾದ ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸ ಮೂರ್ತಿ, ಎಂ.ರಾಜಪ್ಪ, ಮೂರ್ತಿಹಾಳ್ ಕೃಷ್ಣಪ್ಪ, ಗೋವಿಂದಪ್ಪ, ತಿಪ್ಪೇಶಪ್ಪ, ತಿಮ್ಮಲಾಪುರ ದಿನೇಶ್ ಮತ್ತಿತರರಿದ್ದರು.

11ಕೆಕೆಡಿಯು2. ಚೌಳಹಿರಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಚುನಾವಣೆ ಪ್ರಚಾರಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು.

Share this article