ಬರಗಾಲ ಘೋಷಣೆಗೆ ಸರ್ಕಾರ ವಿಧಿಸಿರುವ ಎಲ್ಲ ಮಾನದಂಡಗಳು ಮುದ್ದೇಬಿಹಾಳ ತಾಲೂಕಿಗೂ ಅನ್ವಯಿಸುತ್ತವೆ. ನಮ್ಮದೇ ಸರ್ಕಾರವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಏನು ಮಾಡುತ್ತಿದ್ದಾರೆ. ರೈತರ ನೋವಿನಲ್ಲಿ ರಾಜಕೀಯ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬರಗಾಲ ಘೋಷಣೆಗೆ ಸರ್ಕಾರ ವಿಧಿಸಿರುವ ಎಲ್ಲ ಮಾನದಂಡಗಳು ಮುದ್ದೇಬಿಹಾಳ ತಾಲೂಕಿಗೂ ಅನ್ವಯಿಸುತ್ತವೆ. ನಮ್ಮದೇ ಸರ್ಕಾರವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಏನು ಮಾಡುತ್ತಿದ್ದಾರೆ. ರೈತರ ನೋವಿನಲ್ಲಿ ರಾಜಕೀಯ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಘೋಷಣೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಯಾ ಜಿಲ್ಲೆಗಳಲ್ಲಿನ ಮಳೆ, ಬೆಳೆ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆ ವರದಿ ಆಧರಿಸಿ ಸರ್ಕಾರ ಬರಗಾಲ ಘೋಷಣೆ ಮಾಡುತ್ತದೆ. ಆದರೆ ವಿಜಯಪುರ ಜಿಲ್ಲೆಯ ನೈಜ ಪರಿಸ್ಥಿತಿಯ ವರದಿಯೇ ಸರ್ಕಾರಕ್ಕೆ ತಲುಪದಿದ್ದರೆ ಬರಗಾಲ ಘೋಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸಮರ್ಪಕ ಮಳೆಯಾಗದೆ ರೈತರು ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿವೆ. ರೈತರು ಸಂಕಷ್ಟದಲ್ಲಿದ್ದರೂ ಅವರ ನೋವಿನ ಬಗ್ಗೆ ಕಾಳಜಿ ವಹಿಸದಿರುವುದು ಬೇಸರದ ಸಂಗತಿ. ಮುದ್ದೇಬಿಹಾಳ ತಾಲೂಕಿನಲ್ಲಿ 2.5 ಮಿಮೀಗೂ ಕಡಿಮೆ ಮಳೆಯಾಗಿದ್ದು, ಇದು ಮಳೆ ನಿರಾಶ್ರಿತ ಪ್ರದೇಶವಾಗಿದೆ ಎಂದು ನಾಡಗೌಡ ಹೇಳಿದರು.
ಬರಗಾಲ ಘೋಷಣೆಯಲ್ಲಿ ತಾರತಮ್ಯ:ಬರಗಾಲ ಘೋಷಣೆ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ತಾರತಮ್ಯವಾಗುತ್ತಿದೆ ಎಂದು ನೇರ ಆರೋಪ ಮಾಡಿದ ಶಾಸಕ ನಾಡಗೌಡ ಅವರು, ಮಳೆ ಕೊರತೆಯಿರುವ ಪ್ರದೇಶಗಳನ್ನು ಹೊರತುಪಡಿಸಿ, ಸಂಪೂರ್ಣ ನೀರಾವರಿ ವ್ಯವಸ್ಥೆ ಮಾಡಿರುವ ಪ್ರದೇಶಗಳನ್ನೇ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿರುವುದು ಯಾವ ಮಾನದಂಡದ ಆಧಾರದ ಮೇಲೆ ಎಂಬುದು ಅರ್ಥವಾಗುತ್ತಿಲ್ಲ. ಮುದ್ದೇಬಿಹಾಳ ಸೇರಿದಂತೆ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ರೈತರ ನೋವಿನಲ್ಲಿ ರಾಜಕೀಯ ಮಾಡಬೇಡಿ:ನಾನು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಕೆಲ ಬಿಜೆಪಿ ಮುಖಂಡರನ್ನು ಕರೆಸಿ ಅವರಿಂದ ಮನವಿ ಸಲ್ಲಿಸಿ, ಅದರ ಫೋಟೋ ತೆಗೆಸಿಕೊಂಡು, ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳುವ ರಾಜಕೀಯ ಮಾಡುತ್ತಿದ್ದರು. ಇಂತಹ ಚಿಲ್ಲರೆ ರಾಜಕಾರಣ ಮಾಡಬೇಡಿ. ರೈತರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ರೈತರ ಹಿತವೇ ಎಲ್ಲರ ಆದ್ಯತೆಯಾಗಬೇಕು ಎಂದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಗಡುವು:ಬರಗಾಲ ಘೋಷಣೆ ವಿಷಯದಲ್ಲಿ ನಾನು ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದೆ. ಆದರೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಈ ರೀತಿಯ ಘೋಷಣೆ ಮಾಡಿಸಿರುವುದು ಸರಿಯಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ನೈಜ ವರದಿ ಪಡೆದು ರೈತರಿಗೆ ನ್ಯಾಯ ಒದಗಿಸಬೇಕು. ವಿಜಯಪುರ ಜಿಲ್ಲೆಯೇ ಬರಗಾಲದಿಂದ ತತ್ತರಿಸುತ್ತಿದೆ. ಆದ್ದರಿಂದ ಇಡೀ ಜಿಲ್ಲೆಯನ್ನು ಬರಗಾಲ ಪೀಡಿತವೆಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರೈತರೊಂದಿಗೆ ಸತ್ಯಾಗ್ರಹ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಎಚ್ಚರಿಕೆ ನೀಡಿದರು.----ಜಿಲ್ಲಾ ಸಚಿವರ ನಡೆ ವಿರೋಧಿಸುವೆ:ನಾನು ಜನ ಹಾಗೂ ರೈತರ ಸೇವಕ ರೈತರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ . ಹಾಗಂತ ನಮ್ಮ ಸರ್ಕಾರದ ವಿರುದ್ಧ, ಮುಖ್ಯಮುಂತ್ರಿಗಳ ವಿರುದ್ಧವಾಗಲಿ ದೂರುವುದಿಲ್ಲ. ನಮ್ಮ ಮತಕ್ಷೇತ್ರದ ಜನತೆಗೆ ರೈತರಿಗೆ ಮೋಸ ಮಾಡಲೇಬೇಂದು ತೀರ್ಮಾನಿಸಿ ಸರ್ಕಾರಕ್ಕೂ ಹಾಗೂ ಮುಖ್ಯಮಂತ್ರಿಗಳ ದಾರಿ ತಪ್ಪಿಸುವ ಕೆಲಸ ಮಾಡಿ ಜಿಲ್ಲಾ ಸಚಿವರ ನಡೆಯನ್ನು ನಾನು ವಿರೋಧಿಸುತ್ತೇನೆ. ಇದು ಇಲ್ಲಿಗೆ ಕೊನೆಯಾಗಬೇಕು. ನಮಗೂ ರಾಜಕಾರಣಮಾಡಲು ಬರುತ್ತದೆ ಎಂದು ಕಟುವಾಗಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.