ಕನ್ನಡಪ್ರಭ ವಾರ್ತೆ ಮೈಸೂರು
ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಇಡೀ ಪಾತ್ರೆಯ ಅನ್ನವನ್ನೆಲ್ಲಾ ಪರೀಕ್ಷಿಸಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಉದ್ಯಾನ ನಗರಿ, ಸಾಂಸ್ಕೃತಿಕ ನಗರ, ಅರಮನೆ ನಗರ, ಪಾರಂಪರಿಕ ನಗರಿ, ನಂಬರ್ 1 ಸ್ವಚ್ಚ ನಗರಿ ಮೈಸೂರಿನಲ್ಲಿ ಪಾದಚಾರಿಗಳ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ಅರಿಯಲು ಇಡೀ ಮೈಸರನ್ನು ಸುತ್ತಬೇಕಿಲ್ಲ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿವಾಸದ ಬಳಿ ಬಂದು ನೋಡಿದರೆ ಸಾಕು.
ದೀಪದ ಕೆಳಗೆ ಕತ್ತಲು ಎಂಬಂತೆ ಎಂಡಿಎ ಆಯುಕ್ತರ ನಿವಾಸದ ಪಕ್ಕದಲ್ಲೇ ನಗರ ಪಾಲಿಕೆ ಬೆತ್ತಲು ಎಂಬಂತಾಗಿದೆ! ನಮ್ಮ ಮೈಸೂರು ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ನಗರ ಪೊಲೀಸ್ ಇಲಾಖೆ, ಜಿಲ್ಲಾಡಳಿತ,ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆ ಮತ್ತು ಅನಿಕೇತನ ರಸ್ತೆಯ ಸಂಗಮದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವೃತ್ತವಿದೆ.ಈ ವೃತ್ತದ ಬಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿವಾಸವಿದೆ. ಆಯುಕ್ತರ ಈ ನಿವಾಸಕ್ಕೆ ಹೊಂದಿಕೊಂಡಂತೆ ಅನಿಕೇತನ ರಸ್ತೆಯಲ್ಲಿ ಇರುವ ಈ ಕಟ್ಟಡದ ಮಾಲೀಕರು ತಮ್ಮ ಸ್ವತ್ತಿನಲ್ಲಿ ಇಂದಿಂಚೂ ಜಾಗ ಬಿಡದೆ ಕಟ್ಟಡ ಕಟ್ಟಿ, ಸಾಲದ್ದಕ್ಕೆ ಪಾದಚಾರಿ ಮಾರ್ಗವನ್ನೂ ಅತಿಕ್ರಮಿಸಿಕೊಂಡು ಟೇಬಲ್, ಕುರ್ಚಿ, ಗಿಡ, ಬೇಲಿ ಇತ್ಯಾದಿ ಅಡ್ಡ ಇಟ್ಟು ಪಾದಚಾರಿಗಳ ಹಕ್ಕುಗಳನ್ನು ಕಸಿದಿದ್ದಾರೆ. ಜೊತೆಗೆ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ರಸ್ತೆಯ ಮಧ್ಯೆ ಕಾರು ನಿಲ್ಲಿಸುವುದರಿಂದ ಅನಿಕೇತನ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲು ಪಾದಚಾರಿ ಪಾದಚಾರಿ ಮಾರ್ಗವೂ ಇಲ್ಲ. ರಸ್ತೆ ಬದಿಯೂ ಇಲ್ಲ.
ಅನಿಕೇತನ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹಿರಿಯರು, ಮಕ್ಕಳು, ಮಹಿಳೆಯರು ನಗರ ಪಾಲಿಕೆ, ಪ್ರಾಧಿಕಾರ, ಪೊಲೀಸ್ ಹಾಗೂ ಜಿಲ್ಲಾಡಳಿತವನ್ನು ಶಪಿಸುತ್ತಾ ರಸ್ತೆಯ ಮದ್ಯೆ ಓಡಾಡುತ್ತಿದ್ದಾರೆ.
------------ಕೋಟ್
ಸಾರ್ವಜನಿಕರು ಓಡಾಡುವ ಜಾಗವನ್ನು ಅತಿಕ್ರಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ನಗರ ಪಾಲಿಕೆ ಆಯುಕ್ತರು ಈ ಅಪರಾಧವನ್ನು ನೋಡಿಯೂ ನೋಡದಂತೆ ಸುಮ್ಮನಿರುವುದೂ ಕೂಡ ಅಪರಾಧ. ಈ ಕೂಡಲೇ ಮೈಸೂರಿನ ಪೊಲೀಸ್ ಆಯುಕ್ತರು ಈ ಅತಿಕ್ರಮಣಕೋರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಜೊತೆಗೆ ಮೈಸೂರು ನಗರ ಪಾಲಿಕೆಯ ಆಯುಕ್ತರನ್ನೂ ಕೂಡ ಈ ಪ್ರಕರಣದ ಸಹ ಆರೋಪಿಯನ್ನಾಗಿಸಿ ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸಬೇಕಿದೆ.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.