ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಸಂಸದ ಹಿಟ್ನಾಳ

KannadaprabhaNewsNetwork | Updated : Jul 24 2024, 11:24 AM IST

ಸಾರಾಂಶ

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ, ಪೊಳ್ಳು ಭರವಸೆಗಳನ್ನು ವಿತ್ತ ಸಚಿವರು ಮುಂದುವರೆಸಿದ್ದಾರೆ, ರಾಜ್ಯಕ್ಕೆ ಅನ್ಯಾಯವಾಗಿದೆ

ಕೊಪ್ಪಳ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್‌ ಮಂಡಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದ್ದಾರೆ‌.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಒದಗಿಸಿದ್ದು, ಇತರ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ‌. ಅದರಲ್ಲೂ ಕರ್ನಾಟಕ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರೂ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ, ಐದು ಜನ ಸಚಿವರು ಇದ್ದರೂ ಕೈಗಾರಿಕಾ, ರೈಲ್ವೆ ಸೇರಿದಂತೆ ಇತರೆ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ. ಇದು ನಿರಾಶಾದಾಯಕ, ಜನವಿರೋಧಿ ಬಜೆಟ್ ಇದಾಗಿದ್ದು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ರಾಯಚೂರಿಗೆ ಏಮ್ಸ್ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇವು. ಅದನ್ನು ಕೊಟ್ಟಿಲ್ಲ ಎಂದರು.

ವಿಶೇಷವಾಗಿ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ.

ಈ ಬಜೆಟ್‌ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದು, ರೈತರು 5 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯಿದೆ ರಚಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಜೆಟ್‌ನಲ್ಲಿ ಚಕಾರವನ್ನೇ ಎತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆ ವಿತ್ತ ಸಚಿವರು ಯಾವುದೇ ಮಾತು ಆಡದೆ ರೈತರಿಗೆ ಪಂಗನಾಮ ಹಾಕಿದ್ದಾರೆ. ಇದೊಂದು ರೈತ ವಿರೋಧಿ, ಜನ ವಿರೋಧಿ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ-ತಂಗಡಗಿ:

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ, ಪೊಳ್ಳು ಭರವಸೆಗಳನ್ನು ವಿತ್ತ ಸಚಿವರು ಮುಂದುವರೆಸಿದ್ದಾರೆ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ‌ ಸರ್ಕಾರ ಬಿಹಾರ ಮತ್ತು ಆಂಧ್ರ ರಾಜ್ಯಗಳಿಗೆ ವಿಶೇಷ ಅನುದಾನದ ಪ್ಯಾಕೇಜ್ ಘೋಷಿಸುವ ಮೂಲಕ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ರಾಜಕೀಯ ಯೋಜನೆಯನ್ನು ಘೋಷಿಸಿದೆ. ನಿರ್ಮಲಾ ಸೀತರಾಮನ್ ಅವರು ಕೇವಲ ಬಜೆಟ್ ಮಂಡಿಸಿರುವುದರಲ್ಲಿ ಮಾತ್ರ ಸಾಧನೆ ಮಾಡಿದ್ದಾರೆ. ಕರ್ನಾಟಕದಿಂದ ಎನ್ ಡಿಎ ಪಕ್ಷದ 19 ಮಂದಿಯನ್ನು ರಾಜ್ಯದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದು, ಆದರೆ ರಾಜ್ಯಕ್ಕೆ ಒಂದೇ ಒಂದು ಯೋಜನೆಯನ್ನು ನೀಡದೆ, ಮಲತಾಯಿ ಧೋರಣೆಯನ್ನು ತೋರಿದೆ. ಈ ಮೂಲಕ ಕನ್ನಡಿಗರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅನ್ಯಾಯ ಮಾಡಿದೆ.ಬಜೆಟ್‌ನಲ್ಲಿ ಯುವಕರಿಗೆ, ಮಧ್ಯ‌ಮ ವರ್ಗ ಹಾಗೂ ಬಡ ವರ್ಗದವರಿಗೆ ಏನನ್ನು ನೀಡಿಲ್ಲ. ಇದೊಂದು ಬಡವರ, ದೀನ ದಲಿತರ ಹಾಗೂ ಮಧ್ಯಮ ವರ್ಗದವರ ವಿರೋಧಿ ಬಜೆಟ್ ಎಂದಿದ್ದಾರೆ.

Share this article