ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಟ್ಟಿಲ್ಲ, ಬಾಕಿ ೨ ತಿಂಗಳ ೫ ಸಾವಿರ ಕೋಟಿ ಏನಾಯಿತು ಎನ್ನುವುದಕ್ಕೆ ಲೆಕ್ಕ ಕೊಡುತ್ತಿಲ್ಲ. ಹಣ ಲೂಟಿ ಮಾಡಲೆಂದೇ ಸಾಫ್ಟ್‌ವೇರ್ ಸೃಷ್ಟಿಸಿಕೊಂಡು ವ್ಯವಸ್ಥಿತವಾಗಿ ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಾ ಹಣ ಲೂಟಿ ಹೊಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶೋಕ್‌ಗೌಡ ಟೀಕಿಸಿದರು.
ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಟ್ಟಿಲ್ಲ, ಬಾಕಿ ೨ ತಿಂಗಳ ೫ ಸಾವಿರ ಕೋಟಿ ಏನಾಯಿತು ಎನ್ನುವುದಕ್ಕೆ ಲೆಕ್ಕ ಕೊಡುತ್ತಿಲ್ಲ. ಹಣ ಲೂಟಿ ಮಾಡಲೆಂದೇ ಸಾಫ್ಟ್‌ವೇರ್ ಸೃಷ್ಟಿಸಿಕೊಂಡು ವ್ಯವಸ್ಥಿತವಾಗಿ ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸೇರಬೇಕಾದ ೫ ಸಾವಿರ ಕೋಟಿ ರು. ಅವ್ಯವಹಾರ ಸಂಬಂಧ ನ್ಯಾಯಾಂಗ ಅಥವಾ ಕೇಂದ್ರ ಹಣಕಾಸು ಅವ್ಯವಹಾರಗಳ ಇಲಾಖೆಯಿಂದ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ ವಿಧಾನ ಸಭೆಯಲ್ಲಿ ಪ್ರಶ್ನೆ ಮಾಡಿದ್ದರಿಂದ ಕಳೆದ ೩೪ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ೨ ಸಾವಿರ ರು. ಹಣ ಸಂದಾಯ ಮಾಡುತ್ತಿರುವುದಾಗಿ ಹೇಳಿದೆ. ಆದರೆ, ಸರಿಯಾಗಿ ಮಹಿಳೆಯರ ಖಾತೆಗೆ ಹಣ ಸಂದಾಯ ಮಾಡದೇ ೫೦೦೦ ಕೋಟಿ ರು. ಅವ್ಯವಹಾರವಾಗಿದೆ ಎಂದು ಸಾಂವಿಧಾನಿಕ ಸಂಸ್ಥೆ ಸಿಎಜಿ ವರದಿ ನೀಡಿದೆ ಎಂದು ಹೇಳಿದರು.
ಅಲ್ಲದೇ, ಗೃಹಲಕ್ಷ್ಮಿ ಹೆಸರಿನಲ್ಲಿ ೧೯,೦೨೦ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಯಾವುದೇ ದಾಖಲಾತಿಗಳಿಲ್ಲದ ೨೩,೨೬೨ ಭೂತ ಖಾತೆಗಳನ್ನು ಸೃಷ್ಟಿಸಲಾಗಿದೆ. ೧೦.೦೬ ಲಕ್ಷ ಮಂದಿಯ ಬ್ಯಾಂಕ್ ಖಾತೆಗಳು ೧೦ ಬಾರಿ ಬದಲಾವಣೆಯಾಗಿದೆ ಎಂದು ದೂರಿದರು.
ಗೃಹಜ್ಯೋತಿಯಿಂದ ರೈತನ ಮನೆಗೆ ಉಚಿತ ವಿದ್ಯುತ್ ನೀಡಿ ಕೊಟ್ಟಿಗೆಯ ಬಿಲ್ ಹೆಚ್ಚಳ ಮಾಡಲಾಗಿದೆ. ಕೇಂದ್ರದ ಅಕ್ಕಿ ನೀಡಿ ರಾಜ್ಯದಿಂದ ಅಕ್ಕಿ ನೀಡದೇ ಹಣ ನೀಡುವ ನೆಪದಲ್ಲಿ ವಂಚನೆ ಮಾಡಲಾಗುತ್ತಿದೆ. ಇದೀಗ ಧಾನ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿ ಕಾರ್ಯರೂಪಕ್ಕೆ ತರದೇ ಅಲ್ಲಿಯೂ ಅನ್ಯಾಯ ಎಸಗುತ್ತಿದ್ದಾರೆ ಎಂದು ಖಂಡಿಸಿದರು.
ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ಆರಂಭದಲ್ಲಿ ಬೇಡ, ಅದರಲ್ಲಿ ಯಾರೂ ಭಾಗವಹಿಸದಂತೆ ಆಡಳಿತ ಪಕ್ಷದ ನಾಯಕರು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಹೇಳುತ್ತಿದ್ದರು. ಆದರೆ ಇದೀಗ ಎಸ್‌ಐಆರ್‌ನಿಂದ ದೃಢೀಕರಣಗೊಂಡವರಿಗೆ ಮಾತ್ರ ಗ್ಯಾರಂಟಿ ಯೋಜನೆಯ ಸವಲತ್ತು ನೀಡುವುದಾಗಿ ಹೇಳುತ್ತಿದ್ದಾರೆ. ಎಸ್‌ಐಆರ್ ನೆಪವೊಡ್ಡಿ ಸವಲತ್ತು ನಿರಾಕರಿಸಲು ಮುಂದಾಗಿದ್ದು, ಯೋಜನೆ ಮುಂದುವರೆಸಲು ಇವರಲ್ಲಿ ಹಣವಿಲ್ಲ ಎಂಬುದು ಬಹಿರಂಗವಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡೆ ಶ್ರೀವಲ್ಲಿ, ಅಶೋಕ್ ಜಯರಾಂ, ನಾಗಾನಂದ್ ಇದ್ದರು.
ಮೃತ ಮಹಿಳೆಯರ ಹೆಸರಲ್ಲಿ ಹಣ ಲೂಟಿ: ಶ್ರೀವಲ್ಲಿ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೃತ ಮಹಿಳೆಯರ ಹೆಸರನ್ನು ತೆಗೆಸುವಲ್ಲಿ ವಿಫಲರಾಗಿದ್ದಾರೆ. ಸ್ವಕ್ಷೇತ್ರ ಕಲಬುರಗಿ ಜಿಲ್ಲೆಯಲ್ಲಿ ೯೧೫೬ ಮೃತ ಮಹಿಳೆಯರ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ಕೈ ಹೈಕಮಾಂಡ್ ಪಾತ್ರವೂ ಇರಬಹುದು ಎಂದು ಬಿಜೆಪಿ ಮುಖಂಡೆ ಶ್ರೀವಲ್ಲಿ ಶಂಕೆ ವ್ಯಕ್ತಪಡಿಸಿದರು.
ಗ್ಯಾರಂಟಿ ಸಮಿತಿ ಸದಸ್ಯರಿಗೆ ತಪ್ಪದೇ ವೇತನ ಪಾವತಿ ಆಗುತ್ತಿದೆ. ಆದರೆ, ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸವಲತ್ತು ಲಭ್ಯವಾಗುತ್ತಿಲ್ಲ. ಇವರೆಲ್ಲಾ ಮಹಿಳೆಯರ ಪರ ಎಂದು ಹೇಗೆ ಹೇಳುವರು. ಇವರ ಬಳಿ ಹಣವಿಲ್ಲದೆ, ಸಕಾಲದಲ್ಲಿ ಮಹಿಳೆಯರ ಖಾತೆಗೆ ಹಣ ಪಾವತಿಸದೆ ಹಲವು ತಿಂಗಳ ಹಣವನ್ನು ಒಮ್ಮೆಲೆ ಸಂದಾಯ ಮಾಡುವ ಮೂಲಕ ವಂಚನೆ ಎಸಗಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.