ರಾಜ್ಯ ಸರ್ಕಾರವು ಪ್ರತ್ಯೇಕ ಮಹಿಳಾ ಜಾನಪದ ಅಕಾಡಮಿ ಸ್ಥಾಪಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.
ಕನ್ನಡಪ್ರಭ ಅಜ್ಜಂಪುರ
ರಾಜ್ಯ ಸರ್ಕಾರವು ಪ್ರತ್ಯೇಕ ಮಹಿಳಾ ಜಾನಪದ ಅಕಾಡಮಿ ಸ್ಥಾಪಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಗುರುಸಿದ್ದರಾಮೇಶ‍್ವರ ಭವನದಲ್ಲಿ ನಡೆದ ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಜಾನಪದ ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಪ್ರಾಸ್ತಾವಿಕ ನುಡಿಯಲ್ಲಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಪರಿಷತ್ ಜಿಲ್ಲಾ ಮಹಿಳಾ ಜಾನಪದ ಸಮ್ಮೇಳನ ಹಮ್ಮಿಕೊಂಡಿದೆ. ಸರ್ಕಾರ ಜಾನಪದ ಮಹಿಳಾ ಅಕಾಡೆಮಿ ಸ್ಥಾಪಿಸಬೇಕು, ಜನಪದ ಉಳಿದಿರುವುದು ಮತ್ತು ಬೆಳವಣಿಗೆಯಾಗಿ ಕಾಣುತ್ತಿರುವುದು ಮಹಿಳೆಯರಿಂದಲೇ ಆಗಿದೆ. ಸರ್ಕಾರ 10 ವರ್ಷದಿಂದ ಪರಿಷತ್ತಿಗೆ ಯಾವುದೇ ಅನುದಾನ ನೀಡಿಲ್ಲ. ಆದರೂ ರಾಜ್ಯಾದ್ಯಂತ ಸಂಚಾರ ಮಾಡಿ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಅವರ ಕಲೆಯನ್ನು ಪರಿಚಯಿಸುತ್ತಿದೆ. ಸರ್ಕಾರ ಮಹಿಳಾ ಜಾನಪದ ಕಲಾವಿದರಿಗೆ ಮಾಶಾಸನ ದೊರಕಿಸಿಕೊಡಬೇಕು. ನೆರೆಯ ಆಂಧ್ರ ಪ್ರದೇಶದಲ್ಲಿ ಇರುವಂತೆ ಕನಿಷ್ಠ ಮಾಶಾಸನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ತರೀಕೆರೆ ಶಾಸಕ ಜಿ.ಎಸ್.ಶ್ರೀನಿವಾಸ್ ಮಾತನಾಡಿ, ಜಾನಪದ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಮನರಂಜನೆ ಜತೆಗೆ ಮೌಲ್ಯದ ನಡೆ-ನುಡಿ ಕಟ್ಟಿಕೊಡುತ್ತಿದೆ ಎಂದರು.
ಸಮ್ಮೇಳನ ಅಧ್ಯಕ್ಷರಾದ ಡಾ ಮಂಜುಳ ಹುಲ್ಲಹಳ್ಳಿ ಮಾತನಾಡಿ, ಅಜ್ಜಂಪುರ ಮಹಿಳಾ ಜಾನಪದ ಪರಿಷತ್ತು ಕನ್ನಡ ಸಂಸ್ಕೃತಿಯ ರಕ್ಷಣೆಯಲ್ಲಿ ತನ್ನ ಅಪೂರ್ವ ಹೆಜ್ಜೆ ಗುರುತುಗಳನ್ನು ದಾಖಲಿಸಿದೆ. ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸದೆ ಜನಪದ ಸಾಮಾನ್ಯರ ಶ್ರೀರಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪರಿಷತ್ತಿನ ನಿಜವಾದ ಹೆಗ್ಗಳಿಕೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ತು 31 ಜಿಲ್ಲೆಗಳಲ್ಲಿ 180 ಹೆಚ್ಚು ತಾಲೂಕುಗಳಲ್ಲಿ ಅವರ ರಾಜ್ಯಗಳಲ್ಲೂ ಹೊರ ದೇಶಗಳಲ್ಲೂ ಘಟಕಗಳನ್ನು ಸ್ಥಾಪಿಸುತ್ತಿದೆ. ಇದು ನಮ್ಮೆಲ್ಲರ ಹೆಮ್ಮೆ ಮತ್ತು ಅಭಿಮಾನಕ್ಕೆ ಕಾರಣವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಮಾತನಾಡಿ, ಪರಿಷತ್ತು ಸ್ಥಾಪಿಸಿರುವ ಮಹಿಳಾ ಘಟಕಗಳು ಕನ್ನಡ ಜಾನಪದ ಕಲೆ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವಲ್ಲಿ ಹಲವು ಚಟುವಟಿಕೆಗಳನ್ನು ನಿರ್ವಹಿಸುತ್ತಿವೆ. ರಾಜ್ಯ, ಜಿಲ್ಲಾ ತಾಲೂಕು ಮಹಿಳಾ ಘಟಕಗಳು ತಮ್ಮ ಕಾರ್ಯ ಗೌರವಗಳನ್ನು ಹೋಬಳಿ ಹಳ್ಳಿ ಮನೆ ಮನೆಗೂ ವಿಸ್ತರಿಸುವ ಮೂಲಕ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಅಪೂರ್ವ ಕಾರ್ಯವನ್ನು ನಿರ್ವಹಿಸುತ್ತಿವೆ ಎಂದರು.
ಈ ಸಮ್ಮೇಳನದಲ್ಲಿ ಹಣ್ಣೆ ಮಠದ ಮರುಳಸಿದ್ದ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಎ.ಜಿ ರೇವಣ್ಣ ಎ.ಸಿ.ಚಂದ್ರಪ್ಪ, ಸಿಡಿಪಿಒ ಚರಣ್ ರಾಜ್, ಮಹೇಂದ್ರಚಾರ್, ಎ.ಬಿ.ನವೀನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧಯಾನಂದ್, ಸ್ವಾಗತ ಸಮಿತಿ ಅಧ್ಯಕ್ಷರಾದ ಕವಿತ ಕೇಶವಮೂರ್ತಿ, ಅಜ್ಜಂಪುರ ಘಟಕದ ಅಧ್ಯಕ್ಷರು ಪುಷ್ಪಾ ಬಿ.ಕೆ, ಕಾರ್ಯದರ್ಶಿ ಮಧುಮಾಲತಿ, ರಂಜಿತ ಶ್ರೀನಿವಾಸ್, ನೀಲಾಂಬಿಕ ಇತರರು ಭಾಗವಹಿಸಿದ್ದರು. ಜಿಲ್ಲಾ ಅಧ್ಯಕ್ಷರಾದ ಎಂ.ಎಸ್.ವಿಶಾಲಕ್ಷಮ್ಮ ಸ್ವಾಗತಿಸಿದರು. ವಂದನಾರ್ಪಣೆಯನ್ನು ಮೋಹನ್ ರಾವ್ ಜಾದವ್ ನಿರ್ವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸಮ್ಮಾಳನ ಅಧ್ಯಕ್ಷರನ್ನು ಸಾರೋಟಿನಲ್ಲಿ ವೇದಿಕೆಗೆ ಕರೆತರಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.