ಕಲ್ಪತರು ಇಲ್ಲದಿದ್ದರೆ ತಿಪಟೂರು ದೊಡ್ಡದಾಗುತ್ತಿರಲಿಲ್ಲ

KannadaprabhaNewsNetwork |  
Published : Jul 01, 2026, 01:15 AM IST
ಕಲ್ಪತರು ವಿದ್ಯಾಸಂಸ್ಥೆ ಇಲ್ಲದೇ ಹೋಗಿದ್ದರೆ ತಿಪಟೂರು ದೊಡ್ಡದಾಗಿ ಬೆಳಯಲು ಸಾಧ್ಯವಾಗುತ್ತಿರಲಿಲ್ಲ : ಜೆ.ಸಿ. ಮಾಧುಸ್ವಾಮಿ | Kannada Prabha

ಸಾರಾಂಶ

ಕಲ್ಪತರು ವಿದ್ಯಾಸಂಸ್ಥೆ ಸ್ಥಾಪಿಸಿ ರಾಜ್ಯಾದ್ಯಂತ ಹೆಸರು ಮಾಡುವಂತೆ ಭದ್ರಬುನಾದಿ ಹಾಕಿದ ಮಹನೀಯರ ಶ್ರಮದ ಕುರಿತು ಡಾ. ಸಿದ್ಧಗಂಗಯ್ಯ ಹೊಲತಾಳ್‌ ರಚಿಸಿರುವ ಕಲ್ಪತರು ಕಥನ ಮುಂದಿನ ಪೀಳಿಗೆಗೂ ಉತ್ಸಾಹ ತುಂಬಲಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕಲ್ಪತರು ವಿದ್ಯಾಸಂಸ್ಥೆ ಸ್ಥಾಪಿಸಿ ರಾಜ್ಯಾದ್ಯಂತ ಹೆಸರು ಮಾಡುವಂತೆ ಭದ್ರಬುನಾದಿ ಹಾಕಿದ ಮಹನೀಯರ ಶ್ರಮದ ಕುರಿತು ಡಾ. ಸಿದ್ಧಗಂಗಯ್ಯ ಹೊಲತಾಳ್‌ ರಚಿಸಿರುವ ಕಲ್ಪತರು ಕಥನ ಮುಂದಿನ ಪೀಳಿಗೆಗೂ ಉತ್ಸಾಹ ತುಂಬಲಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಗರದ ಕೆಐಟಿ ಸಭಾಂಗಣದಲ್ಲಿ ಕಲ್ಪತರು ಕಥನ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಲ್ಪತರು ವಿದ್ಯಾಸಂಸ್ಥೆಯ ಪ್ರಾರಂಭದಲ್ಲಿ ನೊಗಹೊತ್ತ ಜೆ.ಆರ್.ಮಹಾಲಿಂಗಯ್ಯನವರು ಭಿಕ್ಷಾಪಾತ್ರೆ ಹಿಡಿದು ಹಳ್ಳಿ-ಹಳ್ಳಿ ತಿರುಗಾಡಿ ಸಂಸ್ಥೆ ಕಟ್ಟಿದರು. ಇದಕ್ಕೆ ಪೂರಕವಾಗಿ ಶ್ರೇಷ್ಠದಾನಿಗಳಾಗಿದ್ದ ಪಲ್ಲಾಗಟ್ಟಿ ಅಡವಪ್ಪನವರು ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸಿದರು. ಎಷ್ಟೋ ಜನರ ಟೀಕೆ, ಟಿಪ್ಪಣಿ, ವ್ಯಂಗ್ಯ ಎದುರಿಸಿ ಈ ಸಂಸ್ಥೆ ಕಟ್ಟಲಾಗಿದೆ. ಇಂದು ಕಲ್ಪತರು ವಿದ್ಯಾಸಂಸ್ಥೆ ಇಲ್ಲದೇ ಹೋಗಿದ್ದರೆ ತಿಪಟೂರು ಇಷ್ಟು ದೊಡ್ಡದಾಗಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣ ವ್ಯಾಪಾರೀಕರಣವಾದರೂ ಎಲ್ಲರಿಗೂ ತಲುಪುವುದರಲ್ಲಿ ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿದೆ. ಕೃತಿಯ ಲೇಖಕ ಜನಸಾಮಾನ್ಯರಿಗೂ ಅರ್ಥವಾಗುವಂತೆ ನಿರೂಪಣೆ ಮಾಡಿದ್ದಾರೆ. ಅವರ ಈ ಕೃತಿಯನ್ನು ಸಂಸ್ಥೆಯ ಪ್ರತಿಯೊಬ್ಬ ಹಿರಿಯ ಹಾಗೂ ಹಾಲಿ ಓದುತ್ತಿರುವ ಎಲ್ಲರೂ ಕೊಂಡು ಓದುವ ಮೂಲಕ ತಾವೂ ಸಮಾಜ ಸೇವೆ ಮಾಡಲು ಪ್ರೇರೇಪಿಸಿಕೊಳ್ಳಬೇಕು ಎಂದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೋಡೇ ಪಿ.ಕೃಷ್ಣ ಮಾತನಾಡಿ ಶಿಕ್ಷಣ ನೀಡುವುದಕ್ಕಿಂತ ಪವಿತ್ರವಾದ ಸೇವೆ ಪ್ರಪಂಚದಲ್ಲಿ ಬೇರೊಂದಿಲ್ಲ. ಕಲ್ಪತರು ಕಥನ ಕೃತಿ ಅತ್ಯಂತ ಸರಳವಾಗಿದ್ದು ಸಂಸ್ಥೆಯ ಚರಿತ್ರೆಯ ಜೊತೆ ನಾಡಿನ ಚರಿತ್ರೆಯೂ ರೂಪಿತವಾಗಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸ್ಥಳೀಯ ಭಾಷೆಗೆ ಶಿಕ್ಷಣದಲ್ಲಿ ಮಹತ್ವ ನೀಡದಿದ್ದರೆ ಆಡಳಿತದಲ್ಲಿ ಕನ್ನಡ ಭಾಷೆ ಕಳೆದುಹೋಗುತ್ತದೆ. ಶಿಕ್ಷಣ ಎಂಬುದು ವ್ಯಾಪಾರವಾಗಬಾರದು. ಕಲ್ಪತರು ಸಂಸ್ಥೆ ಶಿಕ್ಷಣದ ಜೊತೆ ಒಂದು ಪರಂಪರೆಯಾಗಿ ಚರಿತ್ರೆ ದಾಖಲಿಸಿದೆ. ಮೊದಲು ಹೆಣ್ಣು ಮಕ್ಕಳು ಪದವಿ ಶಿಕ್ಷಣ ಪಡೆಯಲು ದೂರದ ನಗರಗಳಿಗೆ ಹೋಗಬೇಕಿತ್ತು. ಕಲ್ಪತರು ವಿದ್ಯಾಸಂಸ್ಥೆ ೧೯೬೧ರಲ್ಲಿ ತಿಪಟೂರಿನಂಥ ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿತವಾದ ಕಾರಣ ಹೆಣ್ಣುಮಕ್ಕಳೂ ಪದವಿಶಿಕ್ಷಣ ಪಡೆಯುವಂತಾಯ್ತು. ಶಿಕ್ಷಣ ದಾಸೋಹ ನಡೆಸುತ್ತಿರುವ ಕಲ್ಪತರು ಸಂಸ್ಥೆ ತನ್ನ ಮೌಲ್ಯವನ್ನು ಕಳೆದುಕೊಳ್ಳದೇ ಹಾಗೇ ಉಳಿಸಿಕೊಂಡಿದೆ ಎಂದರು. ಗುಲ್ಬರ್ಗ ವಿವಿ ಕುಲಪತಿ ಪ್ರೊ ಈ.ಟಿ.ಪುಟ್ಟಯ್ಯ ಗುರುವಂದನಾ ನುಡಿಗಳನ್ನಾಡಿದರು. ಸಂಸ್ಥಾಪಕ ಪ್ರಾಂಶುಪಾಲರಾದ ಪ್ರೊ.ಸುಜಯಾ ಮಹಾಲಿಂಗಯ್ಯರವರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ ಶಿವರಾಜು ಸ್ವಾಗತಿಸಿದರು. ಕಲ್ಪತರು ಕಥನ ಕೃತಿ ಲೇಖಕ ಸಿದ್ದಲಿಂಗಯ್ಯ ಹೊಲತಾಳು ಮಾತನಾಡಿದರು. ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷಕರುಗಳಾದ ಟಿ.ಎಸ್.ಬಸವರಾಜು, ಬಾಗೇಪಲ್ಲಿ ನಟರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿಗಳಾದ ಎಂ.ಆರ್.ಸAಗಮೇಶ್, ಜಿ.ಎಸ್.ಉಮಾಶಂಕರ್, ಟಿ.ಯು.ಜಗದೀಶ್‌ಮೂರ್ತಿ, ಕೆಐಟಿ ಪ್ರಾಂಶುಪಾಲ ಎಚ್.ಬಿ.ಸತೀಶ್‌ಕುಮಾರ್, ಲೇಖಕ ಸಿದ್ದಲಿಂಗಯ್ಯ ಹೊಲತಾಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ವೇತನ ಭರಿಸುವುದು ವಿವಿಗಳಿಗೆ ಅಸಾಧ್ಯ: ಮಧು
ಬದುಕಿನ ಸವಾಲು ಎದುರಿಸಲು ಪುಸ್ತಕ ಓದಿ: ಡಾ.ಮಾನಸ