ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಕಳೆದ ಜೂನ್ ಒಂದರಿಂದಲೇ ಮುಂಗಾರು ಆರಂಭದ ಮುನ್ಸೂಚನೆಯಿದ್ದರೂ ಸಹ ಮೋಡ ಕವಿದ ವಾತಾವರಣ, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತಿತ್ತು. ಮಲೆನಾಡು ಭಾಗದಲ್ಲಿ ಕಾಫಿ, ಅಡಕೆ ಬೆಳೆಗಾರರು ತೋಟಗಳಲ್ಲಿ ಮಳೆಗಾಲದ ಕೆಲಸಗಳನ್ನು ಸಂಪೂರ್ಣಗೊಳಿಸಿ ಮಳೆಗಾಗಿ ಕಾಯುತ್ತಿದ್ದರು. ಭತ್ತದ ಬೆಳೆಗಾರರು ಸಹ ಭತ್ತದ ಕೃಷಿ ಕಾರ್ಯಕ್ಕಾಗಿ ಸಿದ್ಧಗೊಂಡಿದ್ದರು. ಆದರೆ ಮಳೆ ಸಂಪೂರ್ಣವಾಗಿ ಕ್ಷೀಣಿಸಿತ್ತು.
ಸೋಮವಾರ ಆರಿದ್ರೆ ಮಳೆಯು ಮಧ್ಯಾಹ್ನದ ಬಳಿಕ ಬಿರುಸುಗೊಂಡು ಉತ್ತಮ ಪ್ರಮಾಣದಲ್ಲಿ ಸುರಿದಿದ್ದು, ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶ ಮಾತ್ರವಲ್ಲದೇ ಭದ್ರಾನದಿಯ ಉಗಮ ಸ್ಥಾನವಾದ ಗಂಗಾಮೂಲ, ಕುದುರೆಮುಖ, ಕಳಸ, ಬಾಳೆಹೊಳೆ ಮುಂತಾದ ಭಾಗಗಳಲ್ಲಿ ಸಹ ಉತ್ತಮವಾದ ಮಳೆಯಾದ ಪರಿಣಾಮ ಭದ್ರಾನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ.ಪಟ್ಟಣದ ಭದ್ರಾನದಿಯ ಸೇತುವೆಯ ಕಾಮಗಾರಿಯು ಕಳೆದ ಹಲವು ವರ್ಷಗಳಿಂದ ಕುಂಟುತ್ತ ಸಾಗಿದ್ದು, ಸೇತುವೆ ಕಾಮಗಾರಿಗಾಗಿ ಭದ್ರಾನದಿ ಬಳಿಯಲ್ಲಿ ತಂದಿರಿಸಿದ್ದ ಕ್ರೇನ್ ಹಾಗೂ ಜನರೇಟರ್ ನೀರಿನಲ್ಲಿ ಮುಳುಗಿ ಹೋಗಿದೆ. ಸೋಮವಾರ ಬೆಳಿಗ್ಗೆ ಬಾಳೆಹೊನ್ನೂರು ಸುತ್ತಮುತ್ತ ಬಿಸಿಲಿನ ವಾತಾವರಣವಿದ್ದು, ಭದ್ರಾನದಿಯ ದಡದಲ್ಲಿ ನೀರು ಸಂಪೂರ್ಣವಾಗಿ ಬತ್ತಿದ್ದರಿಂದ ಮೈದಾನದಂತೆ ಆಗಿದ್ದ ದಡದಲ್ಲಿ ಬೇಸಿಗೆ ವೇಳೆಯಿಂದ ವಿವಿಧ ಆಟ ಆರಂಭಿಸಿದ್ದ ಸ್ಥಳೀಯ ಯುವಕರು ಕ್ರೀಡಾ ಚಟುವಟಿಕೆಗಳು ಸೋಮವಾರವೂ ನಡೆಸಿದ್ದರು.
ಮಂಗಳವಾರವೂ ಸಹ ಮಳೆ ಸಣ್ಣ ಪ್ರಮಾಣದಲ್ಲಿ ಮುಂದುವರಿದಿದ್ದು, ಥಂಡಿ ಗಾಳಿಯೊಂದಿಗೆ ಮಳೆಗಾಲದ ವಾತಾವರಣ ಸ್ವಲ್ಪ ಮಟ್ಟಿಗೆ ಆರಂಭಗೊಂಡಿದೆ. ಮಳೆ ಮುಂದುವರೆಯುವ ಲಕ್ಷಣ ಕಾಣುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧಗೊಂಡಿದ್ದು, ಅಡಕೆ ತೋಟಗಳಲ್ಲಿ ಬೋರ್ಡೋ ದ್ರಾವಣ ಸಿಂಪಡಣೆಗಾಗಿ ಸಹಕಾರ ಸಂಘ, ರಸಗೊಬ್ಬರದ ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿದ್ದಾರೆ. ಹಲವು ಕಡೆಗಳಲ್ಲಿ ಈಗಾಗಲೇ ಬೋರ್ಡೋ ದ್ರಾವಣ ಸಿಂಪಡಣೆ ಮೊದಲ ಹಂತದಲ್ಲಿ ಪೂರ್ಣಗೊಂಡಿದೆ.