ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಒಳಮೀಸಲಾತಿ ಜಾರಿಗೆ ಆಗ್ರಹ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಒಳಮೀಸಲಾತಿ ಜಾರಿ ಕುರಿತು ತಮ್ಮ ಸಂಪುಟದ ಪರಿಶಿಷ್ಟ ಜಾತಿ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿಗಳ ನಿವಾಸದಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಆರ್.ಬಿ. ತಿಮ್ಮಾಪುರ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು ಕಳೆದ ಮೂರು ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು 2024ರ ನವೆಂಬರ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಒಳಪಂಗಡಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಗೊಳಿಸಲು ದತ್ತಾಂಶ ಪರಿಶೀಲಿಸಿ ವರದಿ ನೀಡುವಂತೆ ನ್ಯಾ.ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಇನ್‌ಕ್ವೈರಿ ಆ್ಯಕ್ಟ್ 1952ರ ಅನ್ವಯ ಆಯೋಗ ರಚನೆ ಮಾಡಿತ್ತು.
2024ರ ನವೆಂಬರ್‌ನಲ್ಲಿ ಆಯೋಗ ರಚಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದರೂ ಅವಧಿ ವಿಸ್ತರಣೆ ಮಾಡಲಾಗಿದೆ. ಇದೀಗ ನಾಲ್ಕು ತಿಂಗಳು ಕಳೆದರೂ ವರದಿ ನೀಡಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರದ ಬಳಿ ಇರುವ ದತ್ತಾಂಶ ಪರಿಶೀಲಿಸಿ ಒಳ ಮೀಸಲು ಜಾರಿ ಮಾಡಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ವಿಳಂಬ ಧೋರಣೆ ಅನುಸರಿಸದೆ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಹರಿಹರದಿಂದ ಶುರುವಾದ ಪಾದಯಾತ್ರೆ ಶುಕ್ರವಾರ ಬೆಂಗಳೂರು ತಲುಪಿದೆ. ಅಲ್ಲದೆ ವಿವಿಧ ಜಿಲ್ಲೆಗಳಲ್ಲೂ ಹೋರಾಟಗಳು ಶುರುವಾಗಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಸಭೆ ಮಹತ್ವ ಪಡೆದುಕೊಂಡಿದೆ.
ಸಚಿವರ ಸಭೆ ಏಕೆ?
ಎಸ್ಸಿ ಸಮುದಾಯಕ್ಕೆ ಒಳಮೀಸಲು ನೀಡದ ಬಗ್ಗೆ ಸಚಿವ ಸಂಪುಟದಲ್ಲಿ ಹಲವು ಸಚಿವರಿಂದಲೇ ಅಪಸ್ವರ. ಪ್ರತ್ಯೇಕ ಸಭೆಗೂ ನಿರ್ಧಾರ
ಒಳಮೀಸಲು ಜಾರಿ ಕುರಿತು ವರದಿಗೆ ರಚಿಸಲಾದ ನ್ಯಾ.ನಾಗಮೋಹನ್‌ದಾಸ್ ಸಮಿತಿ ಅವಧಿ ವಿಸ್ತರಣೆ ಆಗಿದ್ದರೂ ಇನ್ನೂ ವರದಿ ಸಲ್ಲಿಸಿಲ್ಲ
ಶೀಘ್ರ ವರದಿ ಜಾರಿಗೆ ರಾಜ್ಯದ ಹಲವೆಡೆ ಹೋರಾಟ, ಪ್ರತಿಭಟನೆ ತೀವ್ರ । ಹೀಗಾಗಿ ಸಮುದಾಯದ ವಿಶ್ವಾಸಗಳಿಸಲು ಸಚಿವರ ಜೊತೆ ಸಿಎಂ ಸಭೆ