ಸಾಹಿತ್ಯ ಚಟುವಟಿಕೆ ಹೆಚ್ಚಾಗಿ ಕನ್ನಡದ ಅಸ್ಮೀತೆ ಹರಡಲಿ

KannadaprabhaNewsNetwork | Published : Mar 24, 2025 12:38 AM

ಸಾರಾಂಶ

ಸಾವಿರಾರು ವರ್ಷಗಳ ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಪರಂಪರೆ ಗಟ್ಟಿಗೊಳಿಸಿ, ವಿಸ್ತರಿಸಲು ಸಾಹಿತ್ಯ ಸಮ್ಮೇಳನ ಗ್ರಾಮೀಣ ಪರಿಸರದಲ್ಲಿ ಹೆಚ್ಚು ಹೆಚ್ಚು ನಡೆಯುವುದು ಉತ್ತಮ ಬೆಳವಣಿಗೆಗೆ ವೇದಿಕೆಯಾಗಲಿವೆ.

ಕೊಪ್ಪಳ: ಕನ್ನಡ ಅಸ್ಮೀತೆ ಸದಾ ಹರಡಬೇಕು. ಕನ್ನಡ ಸಾಹಿತ್ಯ ಪರ ಚಟುವಟಿಕೆ ಸದಾ ನಡೆಯಬೇಕು ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಹಲಗೇರಿಯಲ್ಲಿ ಜರುಗಿದ ಕಸಾಪ ತಾಲೂಕು ಮಟ್ಟದ 10ನೇ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಭಾಷೆಗೆ ನಾವು ಒತ್ತು ಕೊಡಬೇಕಿದೆ. ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಕನ್ನಡ ಉಳಿಸಬೇಕಿದೆ. ಈ ನೆಲ, ಜಲ, ಭಾಷೆ ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯು ಕಲೆ, ಸಾಹಿತ್ಯದ ದೊಡ್ಡ ಸಂಪತ್ತು. ಕೊಪ್ಪಳ ಸೂಫಿ ಸಂತರ ನಾಡು. ಇದು ಸೌಹಾರ್ಧ ತಾಣ. ಕೊಪ್ಪಳ ಜಿಲ್ಲೆಯಾದ ಬಳಿಕ ಅಭಿವೃದ್ಧಿ ಕಾರ್ಯ ನಡೆದಿದೆ. ಸೌಹಾರ್ದ,ಸಂಸ್ಕೃತಿ ಪರಸ್ಪರ ಹೆಚ್ಚಾಗಲು ಕನ್ನಡ ಸಾಹಿತ್ಯ ಚಟುವಟಿಕೆ ಸಮ್ಮೇಳನಗಳು ವೇದಿಕೆ ಒದಗಿಸುತ್ತವೆ ಎಂದರು.

ಸಾವಿರಾರು ವರ್ಷಗಳ ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಪರಂಪರೆ ಗಟ್ಟಿಗೊಳಿಸಿ, ವಿಸ್ತರಿಸಲು ಸಾಹಿತ್ಯ ಸಮ್ಮೇಳನ ಗ್ರಾಮೀಣ ಪರಿಸರದಲ್ಲಿ ಹೆಚ್ಚು ಹೆಚ್ಚು ನಡೆಯುವುದು ಉತ್ತಮ ಬೆಳವಣಿಗೆಗೆ ವೇದಿಕೆಯಾಗಲಿವೆ. ಸಮ್ಮೇಳನದ ನೆನಪಿಗೆ ಹಾಗೂ ಹಲಗೇರಿ ಗ್ರಾಮದ ಸಂಘಟಕ ದಿ.ರಾಜಶೇಖರ ಅಂಗಡಿ ಹೆಸರಿನಲ್ಲಿ ಹಲಗೇರಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸಕ್ತ ವರ್ಷವೇ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಮ್ಮಿ,ಡ್ಯಾಡಿ ಸಂಸ್ಕೃತಿ ಆತಂಕದ ಸಂಗತಿ. ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ‌. ಯಾವುದೇ ಆರ್ಥಿಕ ನೆರವು ನಿರೀಕ್ಷಿಸದೇ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಳ್ಳಿ ಹಳ್ಳಿಗಳಲ್ಲಿ ಗ್ರಾಮಸ್ಥರೇ ನಡೆಸಬೇಕು. ಮನೆಯ ಮೊದಲ ಪಾಠ ಶಾಲೆಯಾಗಿ ತಾಯಿ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಆಗಬೇಕು. ನಮ್ಮದು ಬದುಕುವ ಭಾಷೆಯಾಗಿದೆ. ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್ತು ಹೇಗೆ ಬಂತು ಹೇಗೆ ಸಮ್ಮೇಳನ ನಡೆದು ಬಂದವು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು. ಪಟ್ಟಿ ಕೊಡುತ್ತೀರಿ ಅಂತ ರಾಜಕಾರಣಿಗಳನ್ನು ಕರೆಯುತ್ತೀರಿ, ಕನ್ನಡ ಸಾಹಿತ್ಯ ತಿಳಿಯಿರಿ, ಯಾವುದೇ ಭಾಷೆಯಾಗಲಿ ಕನ್ನಡ ಭಾಷೆ ಮೊದಲ ಭಾಷೆಯಾಗಲಿ. ಮನೆಯ ಮಗನ ಹುಟ್ಟುಹಬ್ಬವನ್ನು ಮಾಡಿದಂತೆ ಈ ಸಮ್ಮೇಳನ ನಡೆಯಲಿ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶರಣಪ್ಪ ಬಾಚಲಾಪೂರ ಅವರು, 10 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾಲಾ ಡಿ.ಬಡಿಗೇರ ಅವರಿಗೆ ಪರಿಷತ್ತಿನ ಧ್ವಜ ಹಸ್ತಾಂತರ ಮಾಡಿ ಮಾತನಾಡಿ, ಇತಿಹಾಸ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕೊಪ್ಪಳದ ಪರಿಸರ ಹಾಗೂ ಮಾಲಿನ್ಯ ಮುಕ್ತ ವಾತಾವರಣ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ದಿ. ರಾಜಶೇಖರ ಅಂಗಡಿ ಸಮ್ಮೇಳನಕ್ಕೆ ಹಣದ ಕೊರತೆ ಆಗಿದ್ದಾಗ ಮನೆಯ ಬಂಗಾರ ಅಡವಿಟ್ಡು ಸಮ್ಮೇಳನ ನಡೆಸಿದ್ದ.ಅಂತಹ ಕಟ್ಟಾಳು ಅಂಗಡಿ, ಆತನ ಸ್ಮರಣೆಯ ಜತೆಗೆ ಸಮ್ಮೇಳನ ಮುನ್ನಡೆದಿದೆ ಎಂದರು.

ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ ಮಾತನಾಡಿ, ಸಮುದಾಯದ ಕಾರ್ಯಗಳನ್ನು ಒಗ್ಗಟ್ಟಿನಿಂದ ನಿರ್ವಹಿಸುವ ಮನೋಭಾವದ ಹಲಗೇರಿ ಗ್ರಾಮಸ್ಥರು ಇಂದು ಅದೇ ಉತ್ಸಾಹದಿಂದ ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಕವಿರಾಜಮಾರ್ಗಕಾರನಿಂದ ತಿರುಳ್ಗನ್ನಡ ನಾಡು ಎಂದು ಬಣ್ಣಿಸಲ್ಪಟ್ಟಿದೆ. ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ವಿಕಾಸಕ್ಕೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಹಿತಿಗಳು, ಪತ್ರಕರ್ತರು ಹಾಗೂ ಬರಹಗಾರರ ಕೊಡುಗೆ ದೊಡ್ಡದು. ಕೃಷಿಗೆ ಆದತ್ಯೆ ಸಿಗಲಿ, ಮೆಕ್ಕೆಜೋಳ ಪಾರ್ಕ್ ಆಗಲಿ ಎಂದರು.

ಕಾಂಗ್ರೆಸ್ ಧುರೀಣೆ ಮಂಜುಳಾ ಅಮರೇಶ್ ಕರಡಿ ಮಾತನಾಡಿ, ಜಿಲ್ಲೆಯಲ್ಲಿ ಪದ್ಮಶ್ರೀ ಭೀಮವ್ವ ಕಿಳ್ಳಿಕ್ಯಾತರ, ಹುಚ್ಚಮ್ಮ ಚೌಧರಿ, ಮಾಲಾ ಬಡಿಗೇರ ಅವರಂತಹ ಮಹಿಳೆಯರು ಸಾಧನೆಯ ಎತ್ತರಕ್ಕೇರಿರುವುದು ಸಂತಸದ ಸಂಗತಿ ಎಂದರು.

ಕೃತಿಗಳ ಬಿಡುಗಡೆ:

ವೀರಣ್ಣ ವಾಲಿ ರಚಿತ ಅವಿಭಜಿತ ಯಲಬುರ್ಗಾ ತಾಲೂಕಿನ ರಂಗಭೂಮಿ, ರಮೇಶ ಬನ್ನಿಕೊಪ್ಪ ಅವರ ಹೊನ್ನುಡಿಯ ಓದು, ಸಮ್ಮೇಳನ ಸ್ಮರಣ ಸಂಚಿಕೆ ಕೊಪಣ ತೀರ್ಥ ಸೇರಿದಂತೆ ವಿವಿಧ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಹಲಗೇರಿ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಉಪಾಧ್ಯಕ್ಷೆ ವಿರುಪವ್ವ ಹುಚ್ಚಪ್ಪ ಬೇಳೂರು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಶಂಭುಲಿಂಗನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ, ವರುಣಕುಮಾರ ನಿಟ್ಟಾಲಿ, ಗವಿಸಿದ್ಧನಗೌಡ ಪಾಟೀಲ, ಬಸನಗೌಡ ಪಾಟೀಲ, ಕುಬೇರಪ್ಪ ಗೊರವರ, ಶರಣಪ್ಪ ಬಿನ್ನಾಳ, ಶಂಕ್ರಪ್ಪ ಅಂಗಡಿ, ಶರಣಬಸನಗೌಡ ಪಾಟೀಲ, ಹನುಮಂತಪ್ಪ ಹಳ್ಳಿಕೇರಿ, ದೇವೇಂದ್ರಪ್ಪ ಬಡಿಗೇರ, ಸರೋಜ ಗೌಡರ್, ದೇವಪ್ಪ ಓಜನಹಳ್ಳಿ, ಈರಣ್ಣ ಕಂಬಳಿ, ಭೀಮಣ್ಣ ಗುಡ್ಲಾನೂರ, ರಾಮಚಂದ್ರಗೌಡ ಬಿ.ಗೊಂಡಬಾಳ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ವಿರೇಶ ಕೊಪ್ಪಳ, ಎ.ವಿ. ಕಣವಿ, ಎ.ವಿ. ಕಣವಿ, ಮಹಾಂತೇಶ ಮೈನಳ್ಳಿ, ಯಲ್ಲಪ್ಪ, ವಿರುಪಮ್ಮ, ಸರ್ವಮಂಗಳ, ಮಹಾಂತೇಶ, ಕುಬೇರಪ್ಪ,ರಮೇಶ ತುಪ್ಪದ ಕಾರ್ಯಕ್ರಮ ನಿರೂಪಿಸಿದರು.

Share this article