ಗಂಗಾವತಿ: ನಗರದಲ್ಲಿ ಎರಡು ದಿನಗಳ ಕಾಲ ನಡೆಯುವ ಕೊಪ್ಪಳ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಬ್ಬದಂತೆ ಆಚರಿಸೋಣ ಎಂದು ಶಾಸಕ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.ಮಾ. 27 ಮತ್ತು 28 ರಂದು ಸಮ್ಮೇಳನ ನಡೆಯಲಿದ್ದು, ಈಗಾಗಲೇ ಸಿದ್ಧತೆ ನಡೆದಿದೆ. 30ಕ್ಕೂ ಅಧಿಕ ಮೆರವಣಿಗೆಗೆ ಕಲಾ ತಂಡ ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದರು.
ಗಂಗಾವತಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಬಾಳೆ ಕಂಬ ಮತ್ತು ತೆಂಗಿನ ಗರಿಗಳಿಂದ ಸಿಂಗರಿಸಬೇಕು. ಕನ್ನಡದ ಭಾವುಟ ಹಾರಾಡುತ್ತಿರಬೇಕೆಂದು ತಿಳಿಸಿದರು.ಆಮಂತ್ರಣ ಪತ್ರಿಕೆಯಲ್ಲಿ ಯಾರೇ ಹೆಸರು ಇರಲಿ ಬಿಡಲಿ ಕನ್ನಡ ಸೇವೆ ಮಾಡುವದಕ್ಕೆ ಎಲ್ಲರು ಕೈಜೋಡಿಸ ಬೇಕೆಂದರು.
ಸಮ್ಮಳನಾಧ್ಯಕ್ಷರಾಗಿ ಲಿಂಗಾರೆಡ್ಡಿ ಆಲೂರು ಆಯ್ಕೆ ಮಾಡಿರುವದು ಸಂತಸ ತಂದಿದೆ ಎಂದರು.ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಮಾತನಾಡಿ, ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಇಡೀ ಕನ್ನಡಿಗರನ್ನು ಆಯ್ಕೆ ಮಾಡಿದಂತೆ. ಈ ಹಿಂದೆ ನವಲಿಯಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದೀರಿ. ಈಗಲು ಗೌರವಿಸಿದ್ದಿರಿ ನಿಮಗೆ ಕೃತಜ್ಞೆತೆ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣೇಗೌಡ ಮಾತನಾಡಿ, ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರು ಸಹಕರಿಸಬೇಕೆಂದು ತಿಳಿಸಿದ ಅವರು, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಮ್ಮೇಳನ ನಡೆಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಮ್ಮೇಳಾನಧ್ಯಕ್ಷ ಲಿಂಗಾರಡ್ಡಿ ಆಲೂರು ಅವರನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ನಗರಸಭಾ ಅಧ್ಯಕ್ಷ ಮೌಲಾಸಾಬ್, ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರೇಶ ಆರಾಳ, ಮನೋಹರಗೌಡ, ಶ್ರೀನಿವಾಸ ಅಂಗಡಿ, ಶಿವಾನಂದ ತಿಮ್ಮಾಪುರ, ಪ್ರಸನ್ನ ದೇಸಾಯಿ, ಎಂ.ಜೆ. ಶ್ರೀನಿವಾಸ ವೀರಮಹೇಶ್ವರಿ, ಶ್ರೀದೇವಿ ಕೃಷ್ಣಪ್ಪ, ನಾಗರತ್ನ ಎಚ್.ಸೇರಿದಂತೆ ಇತರರು ಭಾಗವಹಿಸಿದ್ದರು.