ರೋಟರಿ ಮಿಸ್ಟಿ ಹಿಲ್ಸ್ ನಿಂದ ವಿನೂತನವಾಗಿ ಕಾರ್ಗಿಲ್ ವಿಜಯ್ ದಿವಸ್

KannadaprabhaNewsNetwork | Published : Jul 28, 2024 2:12 AM

ಸಾರಾಂಶ

527 ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾರ್ಗಿಲ್‌ ವಿಜಯ ದಿನ ಆಚರಿಸಲಾಯಿತು. ರೋಟರಿ ಸದಸ್ಯರು 527 ಹಣತೆಗಳನ್ನು ಬೆಳಗಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 527 ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾರ್ಗಿಲ್ ವಿಜಯ ದಿನವನ್ನು ಭಾವನಾತ್ಮಕಾಗಿ ಆಚರಿಸಲಾಯಿತು.

ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಸೇರಿದಂತೆ ರೋಟರಿ ಸದಸ್ಯರು 527 ಹಣತೆಗಳನ್ನು ಬೆಳಗಿಸಿದರು, ಕಾರ್ಗಿಲ್ ಸಮರದಲ್ಲಿ ಭಾರತದ ಹೆಮ್ಮೆಯ 527 ಯೋಧರು 25 ವರ್ಷಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು. ಈ ಯೋಧರ ತ್ಯಾಗಬಲಿದಾನದ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು,

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ ಮದ್ರಾಸ್ ರೆಜಿಮೆಂಟ್ ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್ ಗಳನ್ನು ಪಡೆದು ಸೇನೆಯಿಂದ ನಿವೃತ್ತರಾದ ಸೇನಾಧಿಕಾರಿ ಬಿ.ಕೆ., ಲೋಕೇಶ್ ಮತ್ತು ಪತ್ನಿ ಕಲ್ಪನ ಲೋಕೇಶ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.

ಸನ್ಮಾನಿತರಾದ ಲೋಕೇಶ್ ಮಾತನಾಡಿ, ನಿವೃತ್ತಿ ನಂತರವೂ ಸಮಾಜದಲ್ಲಿ ಗೌರವವನ್ನು ಸದಾ ಕಾಲ ಪಡೆಯುವ ಸ್ಥಾನ ಎಂದರೆ ಅದು ಯೋಧನದ್ದಾಗಿದೆ, ಸೈನ್ಯದಲ್ಲಿ ಅನೇಕ ವರ್ಷಗಳ ಕಾಲ ದೇಶರಕ್ಷಣೆಯ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ತವರು ನೆಲಕ್ಕೆ ಬಂದು ನೆಲಸಿದ ಸಂದರ್ಭ ಸಂಘ ಸಂಸ್ಥೆಗಳು ಅಂಥ ಯೋಧರನ್ನು ಗುರುತಿಸಿ ಗೌರವಿಸುವ ಪರಂಪರೆ ಶ್ಲಾಘನೀಯ, ಯೋಧನ ಮನ ತೃಪ್ತಿಗೂ ಇಂಥ ಸನ್ಮಾನ ಕಾರಣವಾಗುತ್ತದೆ ಎಂದರು. ಮುಂದಿನ ಜನ್ಮಗಳಲ್ಲಿಯೂ ತನ್ನನ್ನು ಸೈನಿಕನನ್ನಾಗಿ ಮಾಡು ಎಂದು ದೇವರಲ್ಲಿ ಕೋರುವುದಾಗಿ ಹೇಳಿದ ಲೋಕೇಶ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ದೇಶಸೇವೆಯ ಸ್ಮರಣೆಯಲ್ಲಿ ತನ್ನ ಮಕ್ಕಳಿಗೂ ಕಾರ್ಯಪ್ಪ, ತಿಮ್ಮಯ್ಯ ಎಂದೇ ಹೆಸರಿಟ್ಟಿರುವುದಾಗಿ ಹೇಳಿದರು.

ಯೋಧರನ್ನು ಗೌರವಿಸಿ

ಕಾರ್ಗಿಲ್ ಕದನದಲ್ಲಿ ವೀರ ಮರಣವನ್ನಪ್ಪಿದ ಮನೋಜ್ ಕುಮಾರ್ ಭಾಟಿಯಾ ಬಗ್ಗೆ ಮನಸೆಳೆಯುವಂತೆ ಮಾತನಾಡಿದ ಸುಂಟಿಕೊಪ್ಪದ 9 ನೇ ತರಗತಿ ವಿದ್ಯಾರ್ಥಿನಿ ಶ್ರೀಷ, ಭಾರತೀಯ ಯೋಧರ ತ್ಯಾಗ ಬಲಿದಾನಕ್ಕೆ ಮೌಲ್ಯ ಕಟ್ಟಲಾಗದು, ಅವರ ಹೋರಾಟ, ಕರ್ತವ್ಯ ನಿಷ್ಠೆ ಊಹೆಗೂ ನಿಲುಕದ್ದು ಎಂದರಲ್ಲದೇ, ಸೈನಿಕರು ಅಥವಾ ಮಾಜಿ ಸೈನಿಕರನ್ನು ಕಂಡಾಗ ಅವರಿಗೆ ನಮಸ್ಕರಿಸುವ ಮೂಲಕ ದೇಶಸೇವೆ ನಿಟ್ಟಿನಲ್ಲಿ ಅವರ ಕರ್ತವ್ಯ ಸ್ಮರಿಸುವಂತೆ ಮಾಡುವುದೇ ಯೋಧರಿಗೆ ನಾವು ಸಲ್ಲಿಸುವ ಮನಪೂರ್ವಕ ಕೖತಜ್ಞತೆಯಾಗಿದೆ ಎಂದರು.

ಮನಸೆಳೆದ ದೇಶಭಕ್ತಿಗೀತೆಗಳು

ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ , ಸಂಧ್ಯಾ ಚಿದ್ವಿಲಾಸ್ ಅವರು ಕಾರ್ಯಕ್ರಮದಲ್ಲಿ ಹಾಡಿದ ರಾಷ್ಟ್ರದೇವಗೆ,, ಪ್ರಾಣದೀವಿಗೆ,, ಸೇವೆಯಾಗಲಿ ನಾಡಿಗೆ,, ಎಂಬ ದೇಶ ಭಕ್ತಿಗೀತೆ ಮನಸೆಳೆಯಿತು, ಭಾರತೀಯ ಯೋಧರ ತ್ಯಾಗಬಲಿದಾನ, ಶೌರ್ಯದ ಪ್ರತೀಕವಾಗಿದ್ದ ಈ ಹಾಡಿಗೆ ಪ್ರೇಕ್ಷಕರು ತಲೆದೂಗಿದರು. ಇದೇ ಕಾರ್ಯಕ್ರಮದಲ್ಲಿ ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನೇಕ ದೇಶಭಕ್ತಿಗೀತೆಗಳನ್ನು ಉಪನ್ಯಾಸಕಿ ಕೆ, ಜಯಲಕ್ಷ್ಮಿ ಮಾರ್ಗದರ್ಶನದಲ್ಲಿ ಹಾಡಿ ಗಮನ ಸೆಳೆದರು, 5 ವರ್ಷದ ಮಿನುಗು ಭಾರತದ ತಿರಂಗದ ಮಹತ್ವದ ಬಗ್ಗೆ ತೊದಲು ನುಡಿಯಲ್ಲಿಯೇ ಹಾಡಿ ಮೆಚ್ಚುಗೆ ಗಳಿಸಿದರು,

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧು, ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ವಲಯ ಸೇನಾನಿ ಅನಿತಾಪೂವಯ್ಯ, ಕಾರ್ಯಕ್ರಮ ಸಂಚಾಲಕ ಅನಿಲ್ ಎಚ್, ಟಿ,, ಪ್ರಮುಖರಾದ ಬಿ, ಜಿ, ಅನಂತ ಶಯನ, ಕೇಶವಪ್ರಸಾದ್ ಮುಳಿಯ, ಡಾ. ಚೆರಿಯಮನೆ ಪ್ರಶಾಂತ್, ಕೆ ಕೆ, ವಿಶ್ವನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಚಿನ್ನಸ್ವಾಮಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ , ಯೋಗ ಗುರು ಕೆ,ಕೆ, ಮಹೇಶ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್, ಸಿ, ಸತೀಶ್, ಸದಸ್ಯೆ ಸಬಿತಾ, ಸ್ಕೌಟ್ ಮತ್ತು ಗೌಡ್ಸ್ ನ ಸಂಚಾಲಕ ರಂಜಿತ್, ರಮೇಶ್ ಹೊಳ್ಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮಹಿಳೆಯರು, ಮಕ್ಕಳು ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಕಾರ್ಗಿಲ್ ಸಮರದ ಹುತಾತ್ಮರ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸುವ ಮೂಲಕ ಭಾವನಾತ್ಮಕವಾಗಿ ಯೋಧ ಪರಿವಾರಕ್ಕೆ ಗೌರವ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

Share this article