ತನಿಖಾ ಸಮಿತಿ ರಚನೆ ಹಿಂದೆ ಮೈಷುಗರ್ ಖಾಸಗೀಕರಣ: ಆರೋಪ

KannadaprabhaNewsNetwork |  
Published : Jan 23, 2026, 01:30 AM IST
೨೨ಕೆಎಂಎನ್‌ಡಿ-೨ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮಾತನಾಡಿದರು. | Kannada Prabha

ಸಾರಾಂಶ

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ, ಅವ್ಯವಹಾರಗಳ ಕುರಿತಂತೆ ರಾಜ್ಯ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿರುವುದರ ಹಿಂದೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ, ಅವ್ಯವಹಾರಗಳ ಕುರಿತಂತೆ ರಾಜ್ಯ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿರುವುದರ ಹಿಂದೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು.

೨೦೨೫-೨೬ನೇ ಸಾಲಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭದ ಸಮಯದಲ್ಲಿ ಸಕ್ಕರೆ ಆಯುಕ್ತರು, ಕೈಗಾರಿಕೆ ಇಲಾಖೆ, ಹಣಕಾಸು ಇಲಾಖೆಗಳು ೨೦೨೬-೨೭ನೇ ಸಾಲಿಗೆ ಕಾರ್ಖಾನೆಯನ್ನು ಖಾಸಗಿ ವಲಯಕ್ಕೆ ಗುತ್ತಿಗೆ ನೀಡಬೇಕು ಎಂಬ ಷರತ್ತಿನೊಂದಿಗೆ ೧೦ ಕೋಟಿ ರು. ಹಣವನ್ನು ಸಾಲ ರೂಪದಲ್ಲಿ ನೀಡಿದ್ದವು. ಅದರ ಹಿನ್ನೆಲೆಯಲ್ಲೇ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂಬ ಅನುಮಾನವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.

ಕಾರ್ಖಾನೆ ಸಮರ್ಪಕವಾಗಿ ಕಬ್ಬು ಅರೆಯದಿರುವುದಕ್ಕೆ ಜನಪ್ರತಿನಿಧಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಮುಖ್ಯ ಕಾರಣವಾಗಿದೆ. ಅವರೆಲ್ಲರೂ ಹಣದ ಲಭಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಪರಿಶೋಧನಾ ಸಮಿತಿ ಸಭೆ ಮಾಡದೆ, ಲೆಕ್ಕ ಪರಿಶೀಲಿಸದೆ ಹಣ ಲೂಟಿಗೆ ಕಾರಣವಾಗಿದೆ. ಕಳೆದ ೨೫ ವರ್ಷದಲ್ಲಿ ಸುಮಾರು ೬೦೦ ಕೋಟಿ ರು.ವರೆಗೆ ಹಣ ಲೂಟಿಯಾಗಿದೆ. ನಷ್ಟಕ್ಕೆ ಕಾರಣರಾಗಿರುವವರೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಆಪಾದಿಸಿದರು.

ಮೈಷುಗರ್ ಸ್ಥಿತಿ-ಗತಿಯನ್ನು ಅರಿಯುವುದಕ್ಕೆ ಸಚಿವರು ಹಾಗೂ ಜಿಲ್ಲೆಯ ಶಾಸಕರು ಒಮ್ಮೆಯೂ ಭೇಟಿ ನೀಡಲಿಲ್ಲ. ಸಮರ್ಪಕವಾಗಿ ಕಬ್ಬನ್ನು ಅರೆಯುವುದಕ್ಕೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದೀಗ ರಾಜ್ಯ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿ ಕಾರ್ಯೋನ್ಮುಖರಾಗಿರುವುದು ಖಾಸಗೀಕರಣಕ್ಕೆ ಒಪ್ಪಿಸುವ ಗುಮಾನಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಮಾತನಾಡಿ, ಕಾರ್ಖಾನೆ ಅಧ್ಯಕ್ಷರಾಗಿದ್ದ ಎಂ.ನಾಗರಾಜಪ್ಪನವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ, ಇದುವರೆಗೂ ರಾಜ್ಯಸರ್ಕಾರ ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಿಲ್ಲ. ಜಿಲ್ಲಾಡಳಿತ ಅಥವಾ ಕಾರ್ಖಾನೆ ಆಡಳಿತ ಮಂಡಳಿಯಿಂದ ಆಸ್ತಿ ಮುಟ್ಟುಗೋಲಿಗೆ ಅವಕಾಶವಿಲ್ಲ. ನಾಗರಾಜಪ್ಪಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ರಾಜ್ಯಸರ್ಕಾರ, ಸಚಿವರು, ಜನಪ್ರತಿನಿಧಿಗಳಿಗೆ ಆಸಕ್ತಿ ಇರುವಂತೆ ಕಂಡುಬರುತ್ತಿಲ್ಲ ಎಂದು ಟೀಕಿಸಿದರು.

ಮೈಷುಗರ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಯಾವುದೇ ದಾಖಲೆಗಳನ್ನು ಆಡಳಿತ ಮಂಡಳಿ ಒದಗಿಸುತ್ತಿಲ್ಲ. ತನಿಖೆ ನಡೆಸುವುದಿದ್ದರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಅವರನ್ನು ಕಂಪನಿಯಿಂದ ಹೊರಗಿಟ್ಟು ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಸಾಕ್ಷ್ಯನಾಶಪಡಿಸುವುದಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಜಿ.ಬಿ.ಶಿವಕುಮಾರ್, ಕೆ.ಬೋರಯ್ಯ, ಎಚ್.ಸಿ.ಮಂಜುನಾಥ, ಎಸ್.ನಾರಾಯಣ್, ಎಂ.ಬಿ.ನಾಗಣ್ಣಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ