ಐಎನ್ಎಸ್ ಚಾಪೆಲ್, ಟುಪಲೇವ್ ದರ್ಶನ ಭಾಗ್ಯ ಪ್ರವಾಸಿಗರಿಲ್ಲ

KannadaprabhaNewsNetwork |  
Published : May 16, 2024, 12:52 AM IST
ಕಾರವಾರದ ಟಾಗೋರ ಕಡಲ ತೀರದಲ್ಲಿ ಚಾಪೆಲ್ ಯುದ್ಧ ನೌಕೆ, ಟುಪಲೇವ್ ಯುದ್ಧ ನೌಕೆ ಸಂಗ್ರಹಾಲಯ ಮಾಡಿರುವುದು. | Kannada Prabha

ಸಾರಾಂಶ

ಚಾಪೆಲ್, ಟುಪಲೇವ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದರೆ ನೌಕೆ, ವಿಮಾನವನ್ನು ನೋಡಲು, ಕಾರ್ಯಾಚರಣೆ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತಿತ್ತು.

ಕಾರವಾರ: ಐಎನ್‌ಎಸ್ ಚಾಪೆಲ್ ಯುದ್ಧ ನೌಕೆ ದುರಸ್ತಿ ಕಾರ್ಯ ಹಾಗೂ ಟುಪಲೇವ್ ಯುದ್ಧ ವಿಮಾನ ಜೋಡಣಾ ಕಾರ್ಯ ಪೂರ್ಣಗೊಂಡು ತಿಂಗಳು ಉರುಳಿದರೂ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿಲ್ಲ. ಪ್ರವಾಸಿಗರ ಕೇಂದ್ರಬಿಂದುವಾಗಿದ್ದ ಚಾಪೆಲ್, ಟುಪಲೇವ್ ದುರದೃಶ್ಟವಶಾತ್ ಹೊರಗಡೆಯಿಂದ ನೋಡುವಂತಾಗಿದೆ.

ಬೇಸಿಗೆ ರಜೆ ಇರುವುದರಿಂದ ಪಾಲಕರೊಂದಿಗೆ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ಆಗಮಿಸುತ್ತಿದ್ದು, ಅದರಲ್ಲೂ ಅಕ್ಷಯ ತೃತೀಯ, ನಾಲ್ಕನೇ ಶನಿವಾರ, ಭಾನುವಾರ ಸತತ ಮೂರು ದಿನ ರಜೆಯಿದ್ದ ಕಾರಣ ಜಿಲ್ಲೆಗೆ ೪೫ ಸಾವಿರದಿಂದ ೫೦ ಸಾವಿರ ಪ್ರವಾಸಿಗರು ಆಗಮಿಸಿದ್ದರು. ಚಾಪೆಲ್, ಟುಪಲೇವ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದರೆ ನೌಕೆ, ವಿಮಾನವನ್ನು ನೋಡಲು, ಕಾರ್ಯಾಚರಣೆ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತಿತ್ತು.

ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಚಾಪೆಲ್ ನೌಕೆ, ಟುಪಲೇವ್ ವಿಮಾನವನ್ನು ಇಡಲಾಗಿದ್ದು, ಟುಪಲೇವ್ ಈಚೆಗೆ ಆಗಮಿಸಿದ ಕಾರಣ ಸಾಕಷ್ಟು ಜನರು ಯುದ್ಧ ವಿಮಾನವನ್ನು ಒಳಗಡೆಯಿಂದ ನೋಡಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ವಿಶಾಖಪಟ್ಟಣ ಬಿಟ್ಟರೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಯುದ್ಧ ವಿಮಾನ, ಯುದ್ಧ ನೌಕೆ ನೋಡಲು ಸಿಗುವುದು ಕಾರವಾರದಲ್ಲಿ ಮಾತ್ರವಾಗಿದೆ. ದೇಶದ ಬೇರಾವ ಭಾಗದಲ್ಲೂ ಯುದ್ಧ ನೌಕೆ, ಯುದ್ಧ ವಿಮಾನ ಸಂಗ್ರಹಾಲಯ ಸ್ಥಾಪನೆಯಾಗಿಲ್ಲ.

ಕಳೆದ ೨೦೨೩ ಸಪ್ಟೆಂಬರ್‌ನಲ್ಲಿ ಯುದ್ಧ ವಿಮಾನದ ಬಿಡಿಭಾಗಗಳನ್ನು ಟ್ರಕ್‌ಗಳಲ್ಲಿ ತಂದು ಬಳಿಕ ಜೋಡಿಸುವ ಕಾರ್ಯ ನಡೆದಿತ್ತು. ೨೦೨೪ರ ಜನವರಿ ಅಂತ್ಯದಲ್ಲಿ ಜೋಡಣಾ ಕಾರ್ಯ ಸಂಪೂರ್ಣ ಪೂರ್ಣಗೊಂಡಿತ್ತು. ಆಗ ಚಾಪೆಲ್ ಯುದ್ಧ ನೌಕೆಯ ದುರಸ್ತಿ ಕಾರ್ಯ ನಡೆಯುವ ಕಾರಣ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಚಾಪೆಲ್ ದುರಸ್ತಿ ಕಾರ್ಯ ಪೂರ್ಣಗೊಂಡು ಹಲವು ದಿನಗಳು ಕಳೆದಿದೆ. ಆದರೆ ಚಾಪೆಲ್ ಮತ್ತು ಟುಪಲೇವ್ ವಿಮಾನ ನೋಡಲು ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ವಿಮಾನ, ನೌಕೆ ನೋಡಲು ಬಂದ ಪ್ರವಾಸಿಗರು ನಿರಾಸೆಯಿಂದ ತೆರಳುತ್ತಿದ್ದಾರೆ.

ಟುಪಲೇವ್ ಯುದ್ಧ ವಿಮಾನ ಜೋಡಣಾ ಕಾರ್ಯದ ವೇಳೆ ಬಂದಿದ್ದ ನೂರಕ್ಕೂ ಅಧಿಕ ಪ್ರವಾಸಿಗರು ಜೋಡಣಾ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ತಮ್ಮನ್ನು ಸಂಪರ್ಕಿಸಲು ಕೋರಿ ಸಂಗ್ರಹಾಲಯದ ಸಿಬ್ಬಂದಿ ದೂರವಾಣಿ ಸಂಖ್ಯೆ ನೀಡಿಹೋಗಿರುವುದು ಉಲ್ಲೇಖನೀಯವಾಗಿದೆ. ಆದಷ್ಟು ಶೀಘ್ರದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಐಎನ್‌ಎಸ್ ಚಾಪೆಲ್ ನೌಕೆ, ಟುಪಲೇವ್ ವಿಮಾನ ವೀಕ್ಷಣೆಗೆ ಮುಕ್ತ ಮಾಡಿಕೊಡಬೇಕು ಎಂದು ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ