ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ಧಾರದ ವೇಳೆ ಸಿಕ್ಕ ಶಾಸನ
ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿತಾಲೂಕಿನ ನವಲಿ ಗ್ರಾಮದ ಪುರಾತನ ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾದಾಗ ವಿಜಯನಗರ ಅರಸರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಈ ಶಾಸನದಲ್ಲಿ ವಿಜಯನಗರ ಕಾಲದ ವೀರಣ್ಣವೊಡೆಯ ಹಾಗೂ ಅಮರನಾಯಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಬಗ್ಗೆ ಉಲ್ಲೇಖವಿದೆ. ಶಾಸನದ ಕೊನೆಯಲ್ಲಿ ಶಾಪಶಯ ಭಾಗ ತುಂಬಾ ಅಶ್ಲೀಲವಾಗಿ ಕಂಡರಿಸಿರುವುದರ ಬಗ್ಗೆ ಮಾಹಿತಿ ಉಲ್ಲೇಖವೂ ಇದೆ. ಸಂಶೋಧನಾರ್ಥಿ ಡಿ. ವೀರೇಶ ಶಾಸನದ ಕುರಿತು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ. ಸಂಶೋಧಕ ಶಶಿಕುಮಾರ ನಾಯ್ಕ್ ಶಾಸನದ ಪಾಠ ಅರ್ಥೈಸಿದರೆ, ಗ್ರಾಮದ ಶಿವಯ್ಯಸ್ವಾಮಿ, ಸಂಶೋಧಕ ಡಾ. ಯಮನೂರಪ್ಪ ನಂದಾಪೂರ, ಲಕ್ಷ್ಮಣ ಶಾಸ್ತ್ರಿ ವಡಕಿ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ್ದಾರೆ.
ವಿಜಯನಗರ ಕಾಲದ ಪ್ರಾರಂಭದ ಶಾಸನದಲ್ಲಿ ಶಾಪಶಯ ಭಾಗದಲ್ಲಿ ಸೌಮ್ಯ ರಚನೆ ಇತ್ತು. ನಂತರದ ಕಾಲದಲ್ಲಿ ಅಶ್ಲೀಲ ಶಬ್ದಗಳ ಬಳಕೆ, ಪ್ರಾಣಿಗಳ ಗುಪ್ತಾಂಗ, ಸಂಭೋಗ ದೃಶ್ಯದ ಕೆತ್ತನೆಗಳು ನಡೆದಿದ್ದವು. ಇದು ಹೆಚ್ಚಾದಂತೆಲ್ಲ ಶಾಸನದ ಕುರಿತು ಗೌರವ ಕಡಿಮೆಯಾಯಿತು. ಆದರೆ ಶಾಸನಗಳನ್ನು ಅಪಹರಿಸುವ ಮತ್ತು ಹಾಳು ಮಾಡುವ ಕೃತ್ಯಗಳು ಹೆಚ್ಚಾದಂತೆ ಅವುಗಳ ರಕ್ಷಣೆಗೆ ಶಾಪಾಶಯವನ್ನು ಅಶ್ಲೀಲವಾಗಿ ಚಿತ್ರಿಸಲಾಗಿರಬಹುದು ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಶಿವಮೂರ್ತಿ ತಿಳಿಸಿದ್ದಾರೆ.