ಹೊರಗುತ್ತಿಗೆ ನೌಕರರ ಜೀವನದಲ್ಲಿ ಅಭದ್ರತೆ, ಸಂಘರ್ಷ: ಸಂಕೇತ್ ಪೂವಯ್ಯ

KannadaprabhaNewsNetwork | Published : May 5, 2025 12:47 AM

ಸಾರಾಂಶ

ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗಗಳ ದಿನಗೂಲಿ ಹೊರಗುತ್ತಿಗೆ ನೌಕರರ ರಾಜ್ಯ ಮಟ್ಟದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಶಕಗಳಿಂದ ನೋವನ್ನು ಸಹಿಸಿಕೊಂಡು ಯಾವುದೇ ರೀತಿಯ ಭದ್ರತೆಗಳಿಲ್ಲದೆ ಜೀವವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಪರಿಸ್ಥಿತಿ ರಾಜ್ಯ ವನ್ಯಜೀವಿ ವಿಭಾಗಗಳ ದಿನಗೂಲಿ ಹೊರಗುತ್ತಿಗೆ ನೌಕರರದಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಹೇಳಿದರು .

ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗಗಳ ದಿನಗೂಲಿ ಹೊರಗುತ್ತಿಗೆ ನೌಕರರ ರಾಜ್ಯಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ದಶಕಗಳ ನೋವಿಗೆ ಸ್ಪಂದನೆ ಸಿಗುತ್ತದೆ ಹಾಗೂ ಅವೈಜ್ಞಾನಿಕ ನಿರ್ಧಾರವನ್ನು ಸರಿಪಡಿಸುವ ಉದ್ದೇಶದಿಂದ ಇಲ್ಲಿ ಸಭೆ ಸೇರಿದ್ದೇವೆ. 2017ರ ನಂತರ ಅರಣ್ಯ ಇಲಾಖೆಯ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿ ವತಿಯಿಂದ ನೇಮಿಸಲಾಗುತ್ತಿದ್ದು ಇದರಿಂದಾಗಿ ದಿನಗೂಲಿ ನೌಕರರಿಗೆ ಅರಣ್ಯ ಇಲಾಖೆಯೊಂದಿಗೆ ಯಾವುದೇ ರೀತಿಯಾದಂತಹ ಸಂಪರ್ಕ, ಅರಣ್ಯ ಇಲಾಖೆಯ ಸವಲತ್ತುಗಳು ದೊರೆಯುತ್ತಿಲ್ಲ ಎಂದರು.

ಸೇವಾ ಭದ್ರತೆ ನೀಡಲು ಆಗ್ರಹ:

ರಾಜ್ಯ ವನ್ಯಜೀವಿ ಘಟಕದ ಗೌರವ ಅಧ್ಯಕ್ಷರಾದ ಎ.ಎಂ. ನಾಗರಾಜು ಮಾತನಾಡಿ 25 ವರ್ಷಗಳಿಂದ ನಿರಂತರವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಮೂಲ ಹುದ್ದೆಯಿಂದ ಹೊರಗುತ್ತಿಗೆ ದಿನಗೂಲಿ ನೌಕರರನ್ನಾಗಿ ಮಾಡಿ ಅರಣ್ಯ ಇಲಾಖೆ ಹಾಗೂ ನೌಕರರ ನಡುವೆ ಸಂಬಂಧವೇ ಇಲ್ಲದಂತೆ ಮಾಡಲಾಗಿದೆ. ಮೇಲಾಧಿಕಾರಿಗಳು ಕಮಿಷನ್ ಆಸೆಯಿಂದ ಈ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ. ದಿನಗೂಲಿ ಹೊರಗುತ್ತಿಗೆ ನೌಕರರಿಗೆ ಸದ್ಯದ ಮಟ್ಟಿಗೆ ಯಾವುದೇ ರೀತಿಯಾದಂತಹ ಸೇವಾ ಭದ್ರತೆ, ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ದಿನಗೂಲಿ ಹೊರಗುತ್ತಿಗೆ ನೌಕರರನ್ನು ಮೂಲವೃತ್ತಿ ದಿನಗೂಲಿ ನೌಕರರಾಗಿ ಸೇರ್ಪಡೆಗೊಳಿಸಿ 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿದರು .

ಸಮಸ್ಯೆಯನ್ನು ನಿವಾರಿಸಲು ಪ್ರಯತ್ನ:

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹೊರಗುತ್ತಿಗೆ ನೌಕರರ ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ, ಅರಣ್ಯ ಇಲಾಖೆ ದಿನಗೂಲಿ ಹೊರಗುತ್ತಿಗೆ ನೌಕರರು ಸಲ್ಲಿಸಿರುವ ಎರಡು ಮನವಿಗಳಲ್ಲೂ ಯಾವುದೇ ರೀತಿಯಾದಂತಹ ತೊಡಕುಗಳಿಲ್ಲ ಸರ್ಕಾರದ ಅಧೀನದ ದಿನಗೂಲಿ ನೌಕರರಾಗಬೇಕು ಎಂಬ ಮನವಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬರುತ್ತಿಲ್ಲ. ಆದ್ದರಿಂದ ಹೆಚ್ಚು ಒತ್ತಡ ಹಾಗೂ ಪ್ರಭಾವ ಬೀರಿ ಈ ಸಮಸ್ಯೆಯನ್ನು ನಿವಾರಿಸುವಂತಹ ಪ್ರಯತ್ನ ಮಾಡುತ್ತೇನೆ. ನಿವೃತ್ತ ವೇತನವನ್ನು 10 ವರ್ಷ ಕನಿಷ್ಠ ಸೇವೆ ಸಲ್ಲಿಸಿದವರಿಗೆ ನೀಡಬೇಕೆಂದು ನಿಯಮವನ್ನು ರೂಪಿಸಿ ಕಾನೂನು ತರಲಾಗಿದ್ದರು ಇದುವರೆಗೂ ಏಕೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಅರಣ್ಯ ಇಲಾಖೆಯ ದಿನಗೂಲಿ ಹೊರಗುತ್ತಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನವನ್ನು ಮಾಡುತ್ತ ಕಾನೂನಾತ್ಮಕವಾಗಿ ಬೇಡಿಕೆಯನ್ನು ಸಲ್ಲಿಸುತ್ತೇನೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದರೆ ಕಾನೂನಾತ್ಮಕ ಹೋರಾಟವನ್ನು ನಡೆಸಲು ಸಿದ್ದರಿದ್ದು ಈ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯಾಗಿ ಸ್ವತ: ಪತ್ರವನ್ನು ಬರೆದು ಹೆಚ್ಚಿನ ಒತ್ತಾಯವನ್ನು ಮಾಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶೇಕಡ ನೂರರಷ್ಟು ಪ್ರಯತ್ನ ಪಡುತ್ತೇನೆ ಎಂದರು .

ಈ ಸಂದರ್ಭದಲ್ಲಿ ವನ್ಯಜೀವಿ ಘಟಕದ ರಾಜ್ಯ ಉಪಾಧ್ಯಕ್ಷ ಹರೀಶ್, ಕ್ಷೇಮಾಭಿವೃದ್ಧಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ ತಂಬೂರ್ಕರ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹೊರಗುತ್ತಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Share this article