ಎಸ್ಸಿ ಎಸ್ಟಿ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಒತ್ತಾಯ

KannadaprabhaNewsNetwork | Published : Jul 24, 2024 12:18 AM

ಸಾರಾಂಶ

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಪ್ರಗತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಕೆಆರ್‌ಡಿಎಸ್‌ಎಸ್ ಪದಾಧಿಕಾರಿಗಳು ಉಪ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಪ್ರಗತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಕೆಆರ್‌ಡಿಎಸ್‌ಎಸ್ ಪದಾಧಿಕಾರಿಗಳು ಉಪ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾವಣೆಯಾಗುವಂತೆ ಶ್ರಮಿಸಿದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಸಮಸ್ತ ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಸಂವಿಧಾನಕ್ಕೆ ತರಲಾಗಿರುವ 93ನೇ ತಿದ್ದುಪಡಿಯನ್ವಯ ಎಲ್ಲಾ ಉನ್ನತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿ ನೀಡಬೇಕು. ಹಾಸ್ಟೆಲ್‌ಗಳಿಗೆ ಪೀಠೋಪಕರಣಗಳು ಮತ್ತು ಪಠ್ಯಗಳು ಸಮರ್ಪಕವಾಗಿ ಪೂರೈಕೆಯಾಗಬೇಕು. ರಾಜ್ಯದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಸರಿಯಾಗಿಸಲು ಪ್ರತ್ಯೇಕ ಸಮಿತಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ತಾಲೂಕಿನ ಪುರಸಭೆ ಕೇಂದ್ರವಾದ ಕೆಂಭಾವಿ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳ ಶೀಘ್ರ ಮಂಜೂರಾತಿ ಮಾಡಬೇಕು. ವಸತಿ ನಿಲಯಕ್ಕೆ ಬೇಕಾಗಿರುವ ನಿವೇಶನ ಒದಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಮಿತಿಯನ್ನು ₹2 ಕೋಟಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಯಾದಗಿರಿ ಕೆಆರ್‌ಡಿಎಸ್‌ಎಸ್ ಸಂಘಟನಾ ಸಂಚಾಲಕ ಶಿವಶರಣ ನಾಗರೆಡ್ಡಿ, ಗೋಪಾಲ ತಳವಾರ, ಮರೆಪ್ಪ ಸಾಲಿಮನಿ, ಬಸವರಾಜ ಚಿಂಚೋಳಿ, ಶಿವಪ್ಪ ಕಂಬಾರ, ಮಂಜುನಾಥ ಕೊಂಬಿನ್, ಶಿವಕುಮಾರ ದೇವರಮನಿ, ಮಡಿವಾಳಪ್ಪ, ರಾಜಕುಮಾರ, ರಮೇಶ ಬಡಿಗೇರ, ಸಿದ್ದಾರ್ಥ ಮಾಳಳ್ಳಿಕರ್, ಹಣಮಂತ ಬೊಮ್ಮನಹಳ್ಳಿ ಸೇರಿದಂತೆ ಇತರರಿದ್ದರು.

-----

23ವೈಡಿಆರ್3

ಸುರಪುರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನರ ಸರ್ವಾಂಗೀಣ ಪ್ರಗತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆಆರ್‌ಡಿಎಸ್‌ಎಸ್ ಪದಾಧಿಕಾರಿಗಳು ಕೆಂಭಾವಿ ಉಪ ತಹಸೀಲ್ದಾರ್ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.

---000---

Share this article