ದಾವಣಗೆರೆ: ನೂರಾರು ವರ್ಷದಿಂದಲೂ ಜೀವನೋಪಾಯಕ್ಕೆ ಸಾಗುವಳಿ ಮಾಡಿಕೊಂಡು ಬಂದ ಭೂ ರಹಿತ ಬಗರ್ ಹುಕುಂ ಹಾಗೂ ಅರಣ್ಯ ಅವಲಂಭಿತ ರೈತರಿಗೆ ತಕ್ಷಣ ಸಾಗುವಳಿ ಚೀಟಿ, ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ ಅರಣ್ಯ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಆರ್.ಮಂಜುನಾಥ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಅರಣ್ಯ ಅವಲಂಭಿತ ರೈತರಿಗೆ ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ ಜಿಲ್ಲಾ ಭೂ ಹಕ್ಕುದಾರರ ವೇದಿಕೆ, ಶಾಸಕರು, ತಹಸೀಲ್ದಾರರು, ಜಿಲ್ಲಾ ಮಟ್ಟದ ಅರಣ್ಯ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಬಗರ್ ಹುಕುಂ ಸಮಿತಿ ತಕ್ಷಣವೇ ಪುನಾರಚನೆಗೊಂಡು, ಅದರ ಅಧ್ಯಕ್ಷರಾದ ಶಾಸಕರು ನಿಯಮಿತವಾಗಿ ಸಭೆ ಕರೆದು, ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಬೇಕು. 1991-92, 1998-99 ಹಾಗೂ 2018-19ನೇ ಸಾಲಿನಲ್ಲಿ ಸಾಗುವಳಿ ಸಕ್ರಮೀಕರಣಕ್ಕಾಗಿ ಸಲ್ಲಿಸಿದ ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲಿಸಿ, ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಷಣ್ಮುಖನಾಯ್ಕ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಈಶ್ವರಪ್ಪ, ಕಾರ್ಯಕಾರಿ ಸದಸ್ಯ ಜಿತೇಂದ್ರ ಇದ್ದರು.ಚನ್ನಗಿರಿ ತಾಲ್ಲೂಕಿನಲ್ಲಿ ಭೂಮಿ ಹಕ್ಕು ಪತ್ರ ನೀಡಲು, ಗ್ರಾಪಂಗಳ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿ, ಮುಖ್ಯಮಂತ್ರಿಗಳಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಡಿ.4, 5 ಹಾಗೂ 6ರಂದು ವೇದಿಕೆಯ ಮೂಲಕ ಹೋರಾಟ ಹಮ್ಮಿಕೊಂಡಿದ್ದೇವೆ. ಕೆ.ರೂಪಾ ನಾಯ್ಕರಾಜ್ಯ ಸಂಚಾಲಕ, ಜಿಲ್ಲಾ ಭೂ ಹಕ್ಕುದಾರರ ವೇದಿಕೆ