ಹೊಸಪೇಟೆ: ಹರಪನಹಳ್ಳಿ ತಾಲೂಕು ತೌಡೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಸದಸ್ಯರು ಹಾಗೂ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ತೌಡೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯ ಅಧಿಕಾರಿ ಪರಮೇಶ್ವರಪ್ಪ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಹಲವು ವರ್ಷಗಳಿಂದ ನೂರಾರು ರೈತರಿಗೆ ಸಾಲ ನೀಡಿದ್ದೇವೆಂದು ಪಹಣಿ ಹಾಗೂ ಇತರ ದಾಖಲಾತಿ ಪಡೆದುಕೊಂಡು ಖಾಲಿ ಚೆಕ್ ಹಾಗೂ ಸಂಬಂಧಿಸಿದ ದಾಖಲೆ ಸಹಿ ಮಾಡಿಸಿಕೊಂಡು ಅಲ್ಪ ಸ್ವಲ್ಪ ಸಾಲದ ಹಣ ನೀಡಿ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೈತರ ಹೆಸರಿನಲ್ಲಿ ಹೆಚ್ಚು ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ. ಕೆಲವು ರೈತರ ಪಹಣಿಗಳನ್ನು ಕಂಪ್ಯೂಟರ್‌ನಲ್ಲಿ ತೆಗೆದುಕೊಂಡು ರೈತರ ಗಮನಕ್ಕೆ ರೈತರ ಯಾವುದೇ ಸಹಿ ಮಾಡಿಸಿಕೊಳ್ಳದೇ, ಸಾಲ ಮಂಜೂರು ಮಾಡಿಕೊಂಡು ವಂಚನೆ ಮಾಡಿದ್ದಾರೆ. ಮರಣ ಹೊಂದಿದ ರೈತರ ಹೆಸರಿನಲ್ಲಿ ಪಹಣಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ರೈತರ ಸಾಲದ ಹಣವನ್ನು ರೈತರಿಗೆ ನೀಡದೇ ವಂಚಿಸಲಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳ ಉಳಿತಾಯದ ಹಣ, ಸಣ್ಣ ವ್ಯಾಪಾರಸ್ಥರ ಠೇವಣಿ ಹಣ ಬ್ಯಾಂಕಿಗೆ ಕಟ್ಟದೇ ಕೋಟಿ, ಕೋಟಿ ರು. ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂದು ದೂರಿದರು.ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ರೈತರ ಪಹಣಿಗಳಲ್ಲಿ ಸಾಲ ಪಡೆಯಲಾಗಿದೆ. ಈಗ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಮೋಸ ಮಾಡಿ ಪರಾರಿಯಾದ ಪರಮೇಶಪ್ಪ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಿಂಗಮ್ಮ ತೌಡೂರು ಎಂಬ ಕೃಷಿ ಮಹಿಳೆ 2019ರ ಅಕ್ಟೋಬರ್ ಮೃತಪಟ್ಟಿದ್ದಾರೆ. 2020-21ನೇ ಸಾಲಿನಲ್ಲಿ ಅವರು ಮರಣ ಹೊಂದಿದ ನಂತರ ಸಾಲ ಮಂಜೂರು ಮಾಡಲಾಗಿದೆ. ರೈತ ಬಸವರಾಜಗೌಡರ ಜಮೀನಿನ ಪಹಣಿ ಪಡೆದು, ಅವರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಇನ್ನೂ ಮಹಿಳಾ ಸಂಘಗಳ ಸದಸ್ಯೆಯರ ಉಳಿತಾಯ ಹಣ ಕಟ್ಟಿಸಿಕೊಳ್ಳಲಾಗಿದೆ. ಅವರು ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಹಾಗೂ ಮಹಿಳಾ ಸಂಘದ ಸದಸ್ಯೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ರೈತರಿಗೆ ಸಾಲದ ಹಣ ನೀಡದೇ ವಂಚನೆ ಮಾಡಿದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಣಾಧಿಕಾರಿ ಪರಮೇಶ್ವರಪ್ಪ ಅವರನ್ನು ಬಂಧಿಸಿ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ರೈತರ ಸಾಲದ ಹಣ, ಮಹಿಳಾ ಸ್ವಸಹಾಯ ಸಂಘದ ಉಳಿತಾಯದ ಹಣ, ಸಣ್ಣ ವ್ಯಾಪಾರಸ್ಥರ ಠೇವಣಿ ಹಣ ಮತ್ತು ಬಾಂಡ್ ಹಣವನ್ನು ವಾಪಸ್ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗುಡಿಹಳ್ಳಿ ಹಾಲೇಶ, ಪಿ. ಸಿದ್ದನಗೌಡ, ಶಂಭುಲಿಂಗನಗೌಡ, ಎಂ. ಹೆಗ್ಗಪ್ಪ ವೈ. ಕೊಟ್ರೇಶ್, ಆನಂದಗೌಡ್ರು, ಎಂ. ಮೈಲಪ್ಪ, ಚೌಡಪ್ಪ, ಎಸ್. ನಾಗರಾಜ, ಎ.ಎಂ. ಶಿವಯೋಗಯ್ಯ, ಬಿ. ಕೊಟ್ರೇಶ್, ಟಿ. ಪ್ರಕಾಶ್, ಪಿ. ಆನಂದಗೌಡ, ಎಂ. ಬಸವರಾಜಗೌಡ, ಟಿ.ಎಸ್. ನಾಗಭೂಷಣ, ಟಿ.ಎಂ. ನಾಗಭೂಷಣ, ಕೆ. ವಾಗೀಶ. ಟಿ.ಎಸ್. ವಾಗೀಶ, ಎ. ನಾಗರಾಜ, ಎಂ. ಮಂಜಪ್ಪ, ಎಸ್. ಮಂಜುನಾಥ, ವೆಂಕಟೇಶ ನಾಯ್ಕ, ಮರಿಯಪ್ಪ, ಡಿ.ಕೆ. ಆನಂದ ಮತ್ತಿತರರಿದ್ದರು.