ಹುಬ್ಬಳ್ಳಿ:
ಬುಧವಾರ ಸಂಜೆ ವೇಳೆ ಕೆಲ ಕಾಲ ಸುರಿದಿದ್ದ ಮಳೆ ಬಳಿಕ ಶಾಂತವಾಗಿತ್ತು. ಮತ್ತೆ ರಾತ್ರಿ 12ರ ನಂತರ ಶುರುವಾದ ಮಳೆ ಬೆಳಗ್ಗೆ 7ರ ವರೆಗೂ ಸುರಿದು ಹಲವು ಆವಾಂತರ ಸೃಷ್ಟಿಸಿತು. ಚರಂಡಿಗಳೆಲ್ಲ ತುಂಬಿ ನೀರೆಲ್ಲ ರಸ್ತೆ ಮೇಲೆ ಹರಿದು ಜನ ಸಂಚರಿಸುವುದು ಕಷ್ಟಕರವಾಗಿತ್ತು.
ಧಾರವಾಡ ಜಿಲ್ಲೆಯಲ್ಲಿ ಮಳೆಗೆ 27 ಮನೆಗಳಿಗೆ ಹಾನಿ ಸಂಭವಿಸಿದೆ.ಮನೆಗಳಿಗೆ ನುಗ್ಗಿದ ನೀರು:
ಉಣಕಲ್ ಪ್ರದೇಶ, ಸಾಯಿನಗರ, ಹೆಗ್ಗೇರಿ ಕಾಲನಿ, ಮುರುಡೇಶ್ವರ ಫ್ಯಾಕ್ಟರಿ ರಸ್ತೆ, ಉಣಕಲ್ ಕೆರೆ ಭಾಗದ ಕೆಳ ಪ್ರದೇಶ ಸೇರಿದಂತೆ ತಗ್ಗು ಪ್ರದೇಶದ ಬಡಾವಣೆಗೆ ನೀರು ನುಗ್ಗಿ ಪರದಾಡುವಂತಾಯಿತು. ಮಳೆನಿಂತ ಮೇಲೆಯೂ ಬೆಳಗ್ಗೆ 10ರ ವರೆಗೂ ಹಲವು ಕಡೆಗಳಲ್ಲಿ ಚರಂಡಿ ನಾಲಾಗಳು ತುಂಬಿ ಹರಿಯುತ್ತಿರುವುದು ಕಂಡುಬಂದಿತು.
ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿದ್ದು, ಸಬ್‌ಮರ್ಸಿಬಲ್ ಪಂಪ್ ಮೂಲಕ ನೀರನ್ನು ಹೊರಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಶ್ರೀನಗರ ಕ್ರಾಸ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಮೊಣಕಾಲಿನ ವರೆಗೂ ನೀರು ನಿಂತಿತ್ತು. ರಾಮನಗರ, ಅಶೋಕ ನಗರದಲ್ಲಿ ತಡರಾತ್ರಿ ಎರಡು ಮರಗಳು ನೆಲಕ್ಕುರಳಿವೆ.ಕೋಡಿ ಬಿದ್ದ ಉಣಕಲ್ಲ ಕೆರೆ:
ಬುಧವಾರ ತಡರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಇಲ್ಲಿನ ಉಣಕಲ್ಲ ಕೆರೆ ಕೋಡಿ ಹರಿಯಿತು. ಒಮ್ಮಿಂದೊಮ್ಮೆಲೆ ಕೆರೆಗೆ ಅಪಾರ ಪ್ರಮಾಣದ ನೀರು ಬಂದ ಹಿನ್ನೆಲೆಯಲ್ಲಿ ಕೆರೆಯು ಕೋಡಿಬಿತ್ತು. ಉಣಕಲ್ ಕ್ರಾಸ್, ಹಳೆ ಬಸ್ ನಿಲ್ದಾಣ ಮುಂಭಾಗ, ಪ್ರೆಸಿಡೆಂಟ್ ಹೊಟೇಲ್ ಹತ್ತಿರ ಅವಳಿ ನಗರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಡಾವಣೆಯ ರಸ್ತೆಗಳೇ ನಾಲಾ ಸ್ವರೂಪ ಪಡೆದಿದ್ದವು. 40ಕ್ಕೂ ಅಧಿಕ ಕಡೆಗಳಲ್ಲಿ ಒಳಚರಂಡಿ ಮೇಲಿನ ಮ್ಯಾನ್‌ಹೋಲ್ ಓಪನ್ ಆಗಿದ್ದು, ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯಿತು.ತುಂಬಿ ಹರಿದ ಹಳ್ಳಗಳು:
ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು ಹಳ್ಳ ದಾಟಲು ಹರಸಾಹಸ ಪಡುವಂತಾಯಿತು. ಕೊನೆಗೆ ಹಳ್ಳದ ಹರಿವಿನ ಪ್ರಮಾಣ ಇಳಿಕೆಯಾದ ಬಳಿಕ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ತಮ್ಮ ಮನೆಗಳತ್ತ ಮರಳಿದರು.