ದಸರಾ, ಜಾತ್ರಾ ಮಹೋತ್ಸವದಲ್ಲಿ ದೋಷ ಇಲ್ಲದಂತೆ ಕಾರ್ಯನಿರ್ವಹಿಸಿ

KannadaprabhaNewsNetwork |  
Published : Oct 11, 2024, 11:50 PM IST
 ಮಹದೇಶ್ವರ ಬೆಟ್ಟದಲ್ಲಿ  ದಸರಾ,   ಜಾತ್ರಾ ಮಹೋತ್ಸವಗಳಲ್ಲಿ  ಯಾವುದೇ ಲೋಪದೋಷ ಇಲ್ಲದಂತೆ   ಕಾರ್ಯನಿರ್ವಹಿಸಿ ಎ.ಈ. ರಘು  | Kannada Prabha

ಸಾರಾಂಶ

ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಸಭೆಯ ಅಧ್ಯಕ್ಷತೆನ್ನು ಕಾರ್ಯದರ್ಶಿ ಎ.ಇ.ರಘು ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹನೂರು

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಸಂದರ್ಭಗಳಲ್ಲಿ ಸಿಬ್ಬಂದಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಲೋಪ ದೋಷ ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಎಚ್ಚರಿಕೆ ನೀಡಿದರು.

ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯದಶಮಿ ಜಾತ್ರಾ ಸಂಬಂಧಪಟ್ಟ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾನವಮಿ ಆಯುಧ ಪೂಜೆ ವಿಜಯದಶಮಿ, ದೀಪಾವಳಿ ಜಾತ್ರಾ ಮಹೋತ್ಸವ ಸಂಬಂಧ ದಾಸೋಹ, ಲಾಡು ವಿಭಾಗ, ದರ್ಶನದ ವ್ಯವಸ್ಥೆ, ವಿಶೇಷ ದರ್ಶನ ಅತಿಥಿ ಗಣ್ಯರ ಸತ್ಕಾರ, ಶೌಚಾಲಯ ಮೇಲುಸ್ತುವಾರಿ, ಅಂತರಗಂಗೆ, ಕಲ್ಯಾಣಿ, ಸ್ವಚ್ಛತೆ ಸೇರಿ ವಿವಿಧ ಜವಾಬ್ದಾರಿಗಳನ್ನು ಸಂಬಂಧಪಟ್ಟ ಸಿಬ್ಬಂದಿಗೆ ಜವಾಬ್ದಾರಿ ವಹಿಸಲಾಗಿದೆ. ಅಂತಹ ಕೆಲಸ ಕಾರ್ಯಗಳನ್ನು ಪ್ರತಿಯೊಬ್ಬರು ಮಾದಪ್ಪನಿಗೆ ಸೇವೆ ಮಾಡುತ್ತಿದ್ದೇವೆ ಎಂಬ ದೃಷ್ಟಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಒಂದೊಮ್ಮೆ ಯಾವುದಾದರು ಲೋಪ ಕಂಡು ಬಂದರೆ ಅಂತಹ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರಿಗೆ ಪ್ರಾಧಿಕಾರದ ಬೈಲಾದಂತೆ ಮುಂದಿನ ದಿನಗಳಲ್ಲಿ ಆರನೇ ವೇತನ ಶ್ರೇಣಿಯಡಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು , ಕೆಲವು ನೌಕರರು ಆರನೇ ವೇತನ ಶ್ರೇಣಿ ಕೊಡಿಸುವುದಾಗಿ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾವ ಸಿಬ್ಬಂದಿ ಸಹ ಒಂದು ರುಪಾಯಿ ಹಣವನ್ನು ನೀಡಬಾರದು. ನೀವು ನಿಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದರೆ ನಾನು ನಿಮಗೆ ಖಂಡಿತವಾಗಿಯೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ಶ್ರೀ ಕ್ಷೇತ್ರದ ನಾಗಮಲೆ ಭವನ, ಗಿರಿ ದರ್ಶಿನಿ, ಕಾರಯ್ಯ ಬಿಲ್ಲಯ್ಯ ಸೇರಿ ವಸತಿಗೃಹಗಳು ದುರಸ್ತಿಯಾಗಿರುವುದು ಗಮನಕ್ಕೆ ಬಂದಿದ್ದು ಎಲ್ಲವನ್ನು ಸರಿಪಡಿಸಲು ಕ್ರೀಯಾಯೋಜನೆ, ಸಿದ್ಧಪಡಿಸಲಾಗುತ್ತಿದೆ ಜಾತ್ರಾ ಮಹೋತ್ಸವ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭಿಸಿ ಭಕ್ತಾದಿಗಳಿಗೆ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಶೌಚಾಲಯ ದುರಸ್ತಿಗೆ ಕ್ರಮ:

ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ ಕೆಲವು ಶೌಚಾಲಯಗಳು ದುರಸ್ತಿಗೊಂಡಿರುವುದರಿಂದ ವಿಜಯದಶಮಿ ಜಾತ್ರಾ ಮಹೋತ್ಸವ ಪೂರ್ಣಗೊಂಡ ನಂತರ ದೀಪಾವಳಿ ಜಾತ್ರಾ ಮಹೋತ್ಸವದ ಒಳಗೆ ದುರಸ್ತಿಪಡಿಸಲು ಈಗಾಗಲೇ ಸಂಬಂಧಪಟ್ಟ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದರು.

ಕುಂದುಕೊರತೆ ಸಭೆ:

ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಗಳು ಪೂರ್ಣಗೊಂಡ ನಂತರ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳ ಕುಂದುಕೊರತೆ ಸಭೆ ಕರೆಯಲಾಗುವುದು ತಮ್ಮ ಸಮಸ್ಯೆಗಳು ಏನೇ ಇದ್ದರೂ ನೇರವಾಗಿ ತಿಳಿಸಿದರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕ್ಷೇತ್ರದ ಪಾವಿತ್ರ್ಯತೆಗೆ ಸಹಕರಿಸಿ:

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ತಂಬಾಕು ಪದಾರ್ಥಗಳು, ಅಕ್ರಮ ಮದ್ಯ, ಮಾಂಸ ಮಾರಾಟ ನಡೆಯುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿದೆ. ಪ್ರಾಧಿಕಾರದ ಸಿಬ್ಬಂದಿ ಗಮನಕ್ಕೆ ಇದುವರೆಗೂ ಯಾವುದು ಬಂದಿಲ್ಲವಾ ಎಂದು ಪ್ರಶ್ನಿಸಿದರು. ಶ್ರೀ ಕ್ಷೇತ್ರದಲ್ಲಿ ತಂಬಾಕು ಬೀಡಿ, ಸಿಗರೇಟ್ ಪದಾರ್ಥಗಳು, ಮದ್ಯ ಮಾರಾಟ ಸೇರಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುವಂತಹ ಘಟನೆಗಳು ಕಂಡು ಬಂದರೆ ನೇರವಾಗಿ ನನಗೆ ತಿಳಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಉಪ ಕಾರ್ಯದರ್ಶಿ ಚಂದ್ರಶೇಖರ್ ದ್ವಿತೀಯ ದರ್ಜೆ ಸಹಾಯಕರಾದ ಸರಗೂರು ಮಹಾದೇವಸ್ವಾಮಿ, ನಾಗರಾಜು, ಜನಾರ್ಧನ್ ಸ್ವಾಮಿ ಮಲ್ಲಿಕಾರ್ಜುನ್ ಪಾರುಪತ್ತೆ ದಾರ ಮಹಾಲಿಂಗನ ಕಟ್ಟೆ ಮಹಾದೇವಸ್ವಾಮಿ, ಲಾಡು ವಿಭಾಗದ ಮಹದೇವಸ್ವಾಮಿ, ಮಲ್ಲಿಕಾರ್ಜುನ್ ಶಾಸ್ತ್ರಿ ಕಿರಿಯ ಅಭಿಯಂತರ ಸೆಲ್ವ ಗಣಪತಿ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''