ಕನ್ನಡಪ್ರಭ ವಾರ್ತೆ ಮಂಡ್ಯ
ಡಿಸೆಂಬರ್‌ನಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ನಾಡನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ, ಭಾಷೆಯ ಘನತೆ, ಗೌರವವನ್ನು ಕಾಪಾಡಿಕೊಂಡು ಹಾಗೂ ಮುಂದುವರಿಸಿಕೊಂಡು ಹೋಗುವ ಅಪ್ರತಿಮ ಕನ್ನಡದ ಕಣ್ಮಣಿ ಹಾಗೂ ನಾಡಿಗೆ ಅನನ್ಯ ಸಾಹಿತ್ಯ ಕೃತಿಗಳಿಂದ ಕೊಡುಗೆ ನೀಡಿರುವ ಸಮರ್ಥ ಕನ್ನಡದ ಸೇನಾನಿಯನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ೧೨೭ ಮಂದಿ ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.ಅಧ್ಯಕ್ಷರಾಗುವವರಿಗೆ ಕನ್ನಡ ಭಾಷೆಯ ಆಮೂಲಾಗ್ರ ಪರಿಯಚಯವಿರಬೇಕು. ಕನ್ನಡದಲ್ಲಿ ಅನನ್ಯವಾದ, ಮೌಲಿಕವಾದ, ಸಮೃದ್ಧವಾದ ಸಾಹಿತ್ಯ ಕೃಷಿ ಮಾಡಿದವರಾಗಿದ್ದು, ಅವರ ಸಾಹಿತ್ಯ ಕೃತಿಗಳು ಕನ್ನಡಿಗರ, ಕನ್ನಡ ನಾಡಿನ ಗೌರವಕ್ಕೆ, ಪ್ರೀತಿಗೆ ಪಾತ್ರವಾಗಿರಬೇಕು. ಸಮ್ಮೇಳನಾಧ್ಯಕ್ಷರಾಗುವವರು ಕನ್ನಡ ನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿದ್ದು, ಅವರ ಮಕ್ಕಳು ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿರಬೇಕು ಎಂದು ಕಲಾವಿದ ಸೋಮವರದ, ನಾಗಮಂಗಲ ಕೃಷ್ಣಮೂರ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಕಾಶಕರಿಂದ ಸರ್ಕಾರ ಪುಸ್ತಕಗಳನ್ನು ಕೊಳ್ಳುವಲ್ಲಿ ತೋರುತ್ತಿರುವ ವಿಳಂಬ ನೀತಿ ಹಾಗೂ ಅಸಡ್ಡೆಯನ್ನು ಖಂಡಿಸಿ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಡುವವರಾಗಿರಬೇಕು. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಸರ್ಕಾರ ಎಸಗುವ ಯಾವುದೇ ರೀತಿಯ ತಪ್ಪುಗಳನ್ನು ಖಂಡಿಸಿ, ಸರ್ಕಾರಕ್ಕೆ ಬುದ್ಧಿ ಹೇಳಿ ಕೆಲಸ ಮಾಡಿಸುವ ಛಾತಿಯನ್ನು ಹೊಂದಿ, ಪಂಪ, ಕುವೆಂಪು ಅವರ ರೀತಿ ಪ್ರಭುತ್ವದ ಕೆಡಕುಗಳನ್ನು ಹಾಗೂ ಮೌಢ್ಯಗಳನ್ನು ಪ್ರಶ್ನಿಸುವ, ತಿದ್ದುವ ಪ್ರಜ್ಞಾವಂತ ಹೋರಾಟಗಾರರಾಗಿರಬೇಕು ಎಂದು ಆಗ್ರಹಿಸಿದ್ದಾರೆ.ಸಮಾಜದ, ಕನ್ನಡಿಗರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವ ಹಾಗೂ ಯುವ ಜನಾಂಗಕ್ಕೆ ದಾರಿದೀಪವಾಗುವ ವ್ಯಕ್ತಿತ್ವಹೊಂದಿ ಅಪ್ಪಟ ಸಾಹಿತಿಯಾಗಿದ್ದರೆ ಉತ್ತಮ. ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಂಡು, ಪ್ರಭುತ್ವದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಶಕ್ತಿಯುತ ವ್ಯಕ್ತಿತ್ವದವರನ್ನೇ ಆಯ್ಕೆಮಾಡುವಂತೆ ಒತ್ತಾಯಿಸಿದ್ದಾರೆ.