ಧಾರವಾಡ: ಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಯಲ್ಲಿ ಪತ್ತಿನ ಸಹಕಾರಿ ಸಂಘಗಳು ನಿರ್ಣಾಯಕ ಪಾತ್ರ ನಿರ್ವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿಯ ರಾಯಾಪುರದಲ್ಲಿರುವ ಧಾರವಾಡ ಹಾಲು ಒಕ್ಕೂಟದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗೆ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸುವ ಪೂರ್ವದಲ್ಲಿ ಸಹಕಾರಿ ವಲಯದಲ್ಲಿನ ಪಟ್ಟಣ ಪತ್ತಿನ ಸಹಕಾರಿ ಸಂಘಗಳು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅಖಂಡ ಧಾರವಾಡ ಜಿಲ್ಲೆಯು ಸಹಕಾರ ಚಳವಳಿಯ ಉಗಮಸ್ಥಾನ ಎಂಬ ಹೆಗ್ಗಳಿಕೆ ಹೊಂದಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಪತ್ತಿನ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ, ಶಹರ ಮತ್ತು ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಮುಖಾಂತರ ಗತವೈಭವಕ್ಕೆ ಮರಳಬೇಕು. ಈ ದಿಸೆಯಲ್ಲಿ ಸಹಕಾರ ಸಂಘಗಳ ಎಲ್ಲ ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸಬೇಕು ಎಂದರು.ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪುಗೌಡ ಡಿ. ಪಾಟೀಲ, ಜಿಲ್ಲೆಯಲ್ಲಿ ಪತ್ತಿನ ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಲಿವೆ. ಸಂಘದಲ್ಲಿ ವ್ಯವಹಾರ ಮಾಡುವಾಗ ಆಗುವಂತಹ ತೊಂದರೆಗಳನ್ನು ಯೂನಿಯನ್‌ನಿಂದ ಜರಗಿಸುವಂತಹ ಇಂತಹ ತರಬೇತಿಯಲ್ಲಿ ಪಾಲ್ಗೊಂಡು ತರಬೇತಿ ಪ್ರಯೋಜನ ಪಡೆಯಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ, ಸಹಕಾರ ಚಳವಳಿ ಹುಟ್ಟು ಹಾಕಿದ ಧಾರವಾಡ ಜಿಲ್ಲೆಯಲ್ಲಿ ಸಹಕಾರ ರಂಗ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ಕಳವಳಕಾರಿ ಸಂಗತಿ. ಸಂಘಗಳ ನಿರ್ವಹಣೆಯಲ್ಲಿ ಸರ್ಕಾರ ರೂಪಿಸುವ ಸಹಕಾರ ಕಾಯ್ದೆಗಳ ಬಗ್ಗೆ ಅರಿವು ಅಗತ್ಯ. ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಅಗತ್ಯ ಎಂದರು.ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಸಹಕಾರ ಮಹಾಮಂಡಳ ನಿರ್ದೇಶಕರಾದ ಜಿ.ಪಿ. ಪಾಟೀಲ, ಗೀತಾ ಕುಂಬಿ, ಮಲ್ಲಿಕಾರ್ಜುನ ಹೊರಕೇರಿ, ಫಕ್ಕೀರಗೌಡ ಕಲ್ಲನಗೌಡ್ರ ಮತ್ತು ಸದಾಶಿವಗೌಡ ಪಾಟೀಲ ವೇದಿಕೆಯಲ್ಲಿದ್ದರು.
ಆನಂದ ತಳವಾರ ಸ್ವಾಗತಿಸಿದರು. ಸವಿತಾ ಕುರ್ಲಗೇರಿ ನಿರೂಪಿಸಿದರು. ಬಿ.ವಿ. ರವಿಂದ್ರನಾಥ ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವಂತೆ ಆದಾಯ ತೆರಿಗೆ ಕಾಯ್ದೆಯ ಅಂಶಗಳ ಕುರಿತು ಮತ್ತು ಶಿವಾನಂದ ಕುಲಕರ್ಣಿ ಸೈಬರ್ ಸೆಕ್ಯೂರಿಟಿ ಹಾಗೂ ಫ್ರಾಡ್ ಕಂಟರೋಲ್ ಕುರಿತು ಉಪನ್ಯಾಸ ನೀಡಿದರು.