ರೈತರ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಹೆಸರು: ಆಂತಕ ಸೃಷ್ಟಿ

KannadaprabhaNewsNetwork | Updated : Oct 28 2024, 01:19 AM IST

ಸಾರಾಂಶ

ಅಧಿಕಾರಿಗಳ ಮೇಲೆ ಕ್ರಮ ತಗೆದುಕೊಳ್ಳಲು ಶಾಸಕ ಆರಗ ಜ್ಞಾನೇಂದ್ರ ಒತ್ತಾಯ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜಾಪುರ ಜಿಲ್ಲೆಯ ಸಾವಿರಾರು ರೈತರ ಪಹಣಿಯಲ್ಲಿ ರೈತರ ಹೆಸರಿನ ಬದಲಿಗೆ ವಕ್ಫ್‌ ಬೋರ್ಡ್ ಹೆಸರು ನಮುದಾಗಿರುವುದು ರೈತರಲ್ಲಿ ಆತಂಕ ಉಂಟು‌ಮಾಡಿದೆ. ಈ ಭಾಗದಲ್ಲಿ ಅನೇಕ ಮುಸ್ಲಿಂಮರ ಆಸ್ತಿಯು ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ, ಈ ರೀತಿ ಪಹಣಿಯನ್ನು ತಪ್ಪಾಗಿ ನಮೂದಿಸಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತ್ಯತೀತದ ಬಗ್ಗೆ ಬೊಗಳೆ ಬಿಡುವ ಸಚಿವ ಜಮೀರ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪಹಣಿ ಬದಲಾಗಿರುವುದು ಕಂಡು ಬಂದಿದೆ. ಅಧಿಕಾರಿಗಳನ್ನು ಹೆದರಿಸಿ ಪಹಣಿ ಬದಲಿಸಲಾಗಿದೆ ಎಂದು ಆರೋಪ ಮಾಡಿದರು.

ಈ ಹಿಂದೆ ಯಾವ್ಯಾವ ದೇವಸ್ಥಾನದ ಆಸ್ತಿಗಳಿದ್ದವು ಅದನ್ನು ಉಳುವವನೆ ಭೂ ಒಡೆಯ ಎಂಬುವುದಾಗಿ ನಮ್ಮ ಬಿಜೆಪಿ ಸರ್ಕಾರ ಮಾಡಿತ್ತು. ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಇಲ್ಲವಾದರೆ ಯಾರ ಆಸ್ತಿ ಯಾರು ಕಬಳಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಶಿವಮೊಗ್ಗದ ಹಣಗೆರೆಯಲ್ಲಿ ಕೂಡ ವಕ್ಫ ಆಸ್ತಿ‌ ಮಾಡಲು ಹೊರಟಿದ್ದರು, ಅದನ್ನು ನಾನೆ ತಡೆದಿದ್ದೆ ಎಂದು ಹೇಳಿದರು.

ಬಿಜಾಪುರದ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದರೆ ಬಿಜೆಪಿ ಹೋರಾಟ ನಡೆಸುತ್ತದೆ. 1975 ರಿಂದ ಮಣ್ಣು ತಿಂತಿದ್ರಾ ಆಗಲೆ ಗೆಜೆಟ್ ನೋಟಿಫಿಕೇಷನ್ ಆಗಿದ್ದರೆ ಇಲ್ಲಿಯವರೆಗೂ ಏನ್ ಮಾಡ್ತದ್ರಿ ಎಂದು ಪ್ರಶ್ನಿಸಿದರು. ರೈತರ ರಕ್ಷಣೆಗೆ ಬರಬೇಕಿದ್ದ ಸಂಘಟನೆಗಳು ಸೆಕ್ಯೂಲರ್ ಮುಖವಾಡ ಧರಿಸಿಕೊಂಡಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಬೆಲಿಕೇರಿ ಬಂದರಿನಲ್ಲಿ ಸೀಜ್ ಮಾಡಿದ್ದ ಅದಿರನ್ನು ಕದ್ದು ಸಾಗಿಸಿದ್ದ ಶಾಸಕರಿಗೆ ಶಿಕ್ಷೆ ಪ್ರಕಟವಾಗಿದೆ, ಇದರಿಂದ ಕಾಂಗ್ರೆಸಿನ ಮುಖವಾಡ ಕಳಚಲು ಆರಂಭವಾಗಿದೆ. ಇಂತಹ ಭ್ರಷ್ಟರೆ ಕಾಂಗ್ರೆಸಿಗೆ ಬೇಕಾಗಿರೋದು ಎಂದು ದೂಷಿಸಿದರು.

Share this article