ಹತ್ತು ದಿನದಲ್ಲಿ ಸಮಸ್ಯೆ ಬಗೆಹರಿಸಲು ಆರೋಗ್ಯ ಕವಚ ನೌಕರರ ಒತ್ತಾಯ

KannadaprabhaNewsNetwork | Updated : Mar 21 2024, 01:07 AM IST

ಸಾರಾಂಶ

ಮೂರು ತಿಂಗಳ ವೇತನ ಹಾಗೂ ಇತರೆ ಬೇಡಿಕೆಗಳನ್ನು ಇನ್ನು ಹತ್ತು ದಿನಗಳ ಒಳಗೆ ಬಗೆಹರಿಸದಿದ್ದರೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ೧೦೮ ಆ್ಯಂಬುಲೆನ್ಸ್‌ ನೌಕರರ ಸಂಘದ ಪ್ರದೀಪ್ ಎಚ್ಚರಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸೇವೆ ಸ್ಥಗಿತ ಎಚ್ಚರಿಕೆ

ಹಾಸನ: ಮೂರು ತಿಂಗಳ ವೇತನ ಹಾಗೂ ಇತರೆ ಬೇಡಿಕೆಗಳನ್ನು ಇನ್ನು ಹತ್ತು ದಿನಗಳ ಒಳಗೆ ಬಗೆಹರಿಸದಿದ್ದರೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ೧೦೮ ಆ್ಯಂಬುಲೆನ್ಸ್‌ ನೌಕರರ ಸಂಘದ ಪ್ರದೀಪ್ ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ೧೦೮ ಆರೋಗ್ಯ ಕವಚ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೂರು ತಿಂಗಳ ವೇತನವನ್ನು ಇದುವರೆಗೂ ನೀಡಿರುವುದಿಲ್ಲ. ಮೂರು ದಿನದ ಹಿಂದೆ ವೇತನದ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಸಿಬ್ಬಂದಿ ವೇತನ ಕಡಿತವಾಗುವ ಲಕ್ಷಣಗಳು ಕಂಡು ಬಂದಿರುವ ಬಗ್ಗೆ ಮಾಹಿತಿ ತಿಳಿದಿದೆ ಎಂದು ಹೇಳಿದರು.

‘ಡಿಸೆಂಬರ್‌ನಿಂದ ಈ ವರೆಗೆ ನಮಗೆ ಬರಬೇಕಿದ್ದ ವೇತನ ಪಾವತಿ ಆಗಿಲ್ಲ. ಇದರಿಂದ ನಮ್ಮ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವೇತನ ಪಾವತಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಈ ಬಗ್ಗೆ ನಮ್ಮ ಏಜೆನ್ಸಿ ಬಳಿ ವಿಚಾರಿಸಿದಾಗ ಈ ವರೆಗೆ ಸರ್ಕಾರದಿಂದ ನಮಗೆ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಈ ಹಿಂದೆ ನೀಡುತ್ತಿದ್ದ ವೇತನದಲ್ಲಿ ಕಡಿತ ಮಾಡಲಾಗಿದೆ. ಕಡಿತ ಮಾಡಿರುವ ಹಣವನ್ನು ನೀಡದೆ ಇರುವುದು ನಮ್ಮ ಜೀವನ ಸಾಗಿಸಲು ತುಂಬಾ ಕಷ್ಟವಾಗಿದೆ. ಈ ಹಿಂದೆ ಚಾಲಕರಿಗೆ ೩೨ ಸಿಬ್ಬಂದಿಗೆ ೨೮ ಸಾವಿರ ರು. ನೀಡಲಾಗಿದೆ. ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವೇತನ ಮತ್ತು ಮೂಲ ವೇತನ ಕಡಿತ ಮಾಡುವ ವಿಚಾರವನ್ನು ಬಗೆಹರಿಸಿ ಕೊಡಬೇಕು. ನಮ್ಮ ನ್ಯಾಯಯುತ ಬೇಡಿಕೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ೧೦ ದಿನದ ಒಳಗೆ ಬಗೆಹಸಿರಿಕೊಡಸದಿದ್ದರೆ ನಮ್ಮ ಕಾರ್ಯ ಸೇವೆಯನ್ನು ಸ್ಥಗಿತಗೊಳಿಸಿ ಅಸಾಹಯಕರಾಗಿ ಮುಷ್ಕರಕ್ಕೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸುವರ್ಣ ಕರ್ನಾಟಕ ಆರೋಗ್ಯ ಕವಚ ೧೦೮ ನೌಕರರ ಸಂಘದ ಅಧ್ಯಕ್ಷ ಕೆ.ಕೆ. ಗಿರೀಶ್, ಸುರೇಶ್, ಶಂಕರ್, ಸುರೇಶ್, ತಾರನಾಥ್ ಇತರರು ಉಪಸ್ಥಿತರಿದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ 108 ಆ್ಯಂಬುಲೆನ್ಸ್‌ ನೌಕರರ ಸಂಘದ ಪ್ರದೀಪ್.

Share this article