ಅಧಿಕಾರಿಗಳು ನೀಡುವ ವರದಿ ಮೇಲೆ ಕ್ರೀಡಾಂಗಣ ನಿರ್ಧಾರ

KannadaprabhaNewsNetwork |  
Published : Mar 06, 2026, 01:15 AM IST
54 | Kannada Prabha

ಸಾರಾಂಶ

ವಿವಿಧ ಸಂಘಟನೆಗಳ ಮುಖ್ಯಸ್ಥರು, ಪರಿಸರವಾದಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಕೆಎಸ್ ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆ, ಬೇಡವೇ ಎಂಬುದನ್ನು ಅಧಿಕಾರಿಗಳು ನೀಡುವ ವರದಿ ಮೇಲೆ ನಿರ್ಧಾರ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ಕೆಎಸ್ ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದನ್ನು ವಿರೋಧಿಸಿ ಕಳೆದ 15 ದಿನಗಳಿಂದ ಕಾರ್ಮಿಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಪರಿಸರವಾದಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಗುರುವಾರ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಕ್ರೀಡಾ ಇಲಾಖೆ ಗುರುತಿಸುವ ಜಾಗದ ಪರಿಶೀಲನೆ ನಡೆಸಿ, ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.ಪಟ್ಟಣದ ಕೆಎಸ್ ಐಸಿ ಆವರಣದಲ್ಲಿಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಆದರೆ ಗೊತ್ತು ಗುರಿ ಇಲ್ಲದೇ ಈ ನಿರ್ಧಾರ ತೆಗೆದುಕೊಂಡಿಲ್ಲ. ಸುಮ್ಮನೆ ಕೆಎಸ್ ಐಸಿಯವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಕೂಡ ಅಲ್ಲ, ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಮ್ಮ ವರುಣ ಮತ್ತು ಟಿ. ನರಸೀಪುರ ಕ್ಷೇತ್ರದ ಮತದಾರರು. ಅವರಿಗೇನಾದರೂ ತೊಂದರೆಯಾದ್ರೆ ನಮಗೂ ತೊಂದರೆ ಯಾಗುತ್ತೆ, ಅವರಿಗೆ ತೊಂದರೆ ಕೊಟ್ಟು ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಉದ್ದೇಶ ಕೂಡ ಇರಲಿಲ್ಲ. ಆದರೆ ಬೇರೆ ಯಾವುದೇ ಜಾಗದ ಲಭ್ಯತೆ ಇರಲಿಲ್ಲ. ಮೊದಲಿಗೆ ಪಟ್ಟಣದ ಒಳಗೆ ಕ್ರೀಡಾಂಗಣ ನಿರ್ಮಿಸಲು ತೋಟಗಾರಿಕೆ ಇಲಾಖೆಯ ಜಾಗ ಪರಿಶೀಲನೆ ಮಾಡಿದ ವೇಳೆ ಜಾಗ ಸಾಲದೆಂಬ ಕಾರಣಕ್ಕೆ ಹಾಗೂ ಟಿಎಪಿಸಿಎಂಎಸ್ ಜಾಗವನ್ನು ತೆಗೆದುಕೊಳ್ಳಲು ಬರುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಕೈ ಬಿಟ್ಟು, ಅಧಿಕಾರಿಗಳು ಕೆಎಸ್ ಐಸಿ ಆವರಣದ ಜಾಗ ಸೂಕ್ತ ಎಂದು ವರದಿ ಕೊಟ್ಟ ಮೇಲೆಯಷ್ಟೇ ಈ ಜಾಗದ ಗುರುತು ಮಾಡಲಾಗಿದೆ ಎಂದರು.ಆದರೆ ನಂತರದ ಬೆಳವಣಿಗೆಯಲ್ಲಿ ಹಲವಾರು ಸಂಘಟನೆಗಳು, ಪರಿಸರವಾದಿಗಳು, ಕಾರ್ಮಿಕರು ಕ್ರೀಡಾಂಗಣ ನಿರ್ಮಾಣಕ್ಕೆ ಇದು ಸೂಕ್ತವಾದ ಜಾಗವಲ್ಲ ಕಾರ್ಖಾನೆಗೆ ನದಿಯಿಂದ ಪೈಪ್ ಲೈನ್ ಹೋಗಿದೆ, ಬಾಯ್ಲರ್ ಇದೆ, ಕಲ್ಲಿದ್ದಲು ಸುರಿಯಲು ಜಾಗದ ಅವಶ್ಯಕತೆ ಇದೆ ಎಂದು ಹಲವಾರು ತಾಂತ್ರಿಕ ಕಾರಣಗಳನ್ನು ಹೇಳಿದ್ದಾರೆ. ಹಾಗಾಗಿ ಇಷ್ಟೆಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಮತ್ತೊಮ್ಮೆ ಅಧಿಕಾರಿಗಳಿಗೆ ಕ್ರೀಡಾಂಗಣ ನಿರ್ಮಾಣಕ್ಕೆ ನಿಜಕ್ಕೂ ಈ ಜಾಗ ಸೂಕ್ತ ಅಲ್ಲ ಎಂಬುದರ ಬಗ್ಗೆ ಮತ್ತೊಂದು ಗಂಭೀರವಾದ ವರದಿ ನೀಡುವಂತೆ ಕೇಳಿದ್ದೇನೆ ಎಂದರು. ಜಾಗ ಸೂಕ್ತವಲ್ಲ ಎಂದರೆ ಕ್ರೀಡಾಂಗಣ ಕೈ ಬಿಡೋಣಅಧಿಕಾರಿಗಳು ಜಾಗ ಸೂಕ್ತವಲ್ಲ ಎಂದು ವರದಿ ನೀಡಿದ್ರೆ ಇಲ್ಲಿ ಕ್ರೀಡಾಂಗಣ ಮಾಡುವುದನ್ನು ಕೈ ಬಿಡೋಣ, ಒಂದು ವೇಳೆ ಕ್ರೀಡಾಂಗಣ ನಿರ್ಮಿಸಲು ಈ ಜಾಗ ಸೂಕ್ತವಾಗಿದೆ, ಕಾರ್ಮಿಕರು ಕೊಟ್ಟಿರುವ ತಾಂತ್ರಿಕ ಕಾರಣಗಳು ಸರಿ ಇಲ್ಲ ಎಂದು ವರದಿ ನೀಡಿದರೆ ಇಲ್ಲೇ ಕ್ರೀಡಾಂಗಣ ಮಾಡೋಣ ಎಂದು ಸ್ಪಷ್ಟ ಪಡಿಸಿದರು. ಕ್ರೀಡಾಂಗಣ ವನ್ನು ನಾವು ವೈಜ್ಞಾನಿಕ ಆಧಾರದ ಮೇಲೆ ಮಾಡಬೇಕಾಗುತ್ತೆ.ನಾವು ಈ ಜಾಗವನ್ನು ಆಯ್ಕೆ ಮಾಡಿದ್ದು, ಕೂಡ ಅಧಿಕಾರಿಗಳು ಹೇಳಿದ ಮೇಲೆಯೇ ಹೊರತು ರ್ಯಾಂಡಮ್ ಆಗಿ ಅಲ್ಲ ಎಂದರು. ಫ್ಯಾಕ್ಟರಿ ಮುಚ್ಚಿ ಕಾರ್ಮಿಕರಿಗೆ ತೊಂದರೆ ಕೊಡೋದಿಲ್ಲ ಅಧಿಕಾರಿಗಳು ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಸರಿಯಿದೆ ಎಂದರೆ ಮಾತ್ರವೇ ಕ್ರೀಡಾಂಗಣ ನಿರ್ಮಿಸಲು ಮುಂದಾಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಪ್ಯಾಕ್ಟರಿ ಮುಚ್ಚಿ ಕಾರ್ಮಿಕರಿಗೆ ತೊಂದರೆ ಕೊಡುವುದಿಲ್ಲ. ಫ್ಯಾಕ್ಟರಿ ಮುಚ್ಚುವ ಪ್ರಮೇಯವೇ ಇಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ಕಾರ್ಮಿಕರ ಹಿತಾಸಕ್ತಿ ಇಟ್ಟುಕೊಂಡೇ ಅಂತಿಮ ತೀರ್ಮಾನಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. ಅಧಿಕಾರಿಗಳು, ಮುಖಂಡರ ಸಭೆಕಾರ್ಖಾನೆ ಭೇಟಿಗೆ ಮೊದಲು ಯತೀಂದ್ರ ಸಿದ್ದರಾಮಯ್ಯ ಹಳೇ ಸಂತೇಮಾಳದ ಬಳಿಯ ಅತಿಥಿ ಗೃಹದಲ್ಲಿ ಕ್ರೀಡಾಂಗಣ ನಿರ್ಮಾಣದ ಕುರಿತಂತೆ ಹಾಗೂ ಕ್ರೀಡಾಂಗಣ ನಿರ್ಮಿಸುವುದರಿಂದ ಆಗಬಹುದಾದ ಅನಾನುಕೂಲಗಳ ಬಗ್ಗೆ ಅಧಿಕಾರಿಗಳು ಹಾಗು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಕ್ರೀಡಾಂಗಣ ನಿರ್ಮಾಣವಾಗದಿದ್ದಲ್ಲಿ ಬಂದಿರುವ ಅನುದಾನ ವಾಪಸ್ ಆಗುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರು. ಆದರೆ ಯಾವುದೇ ಕಾರಣಕ್ಕೂ ಹಣ ವಾಪಾಸ್ ಹೋಗುವುದಿಲ್ಲ ಎಂದು ಯತೀಂದ್ರ ತಿಳಿಸಿದರು.ಕ್ರೀಡಾಂಗಣ ನಿರ್ಮಾಣದಿಂದ ಕಾರ್ಮಿಕರಿಗೆ ತೊಂದರೆ ಉಂಟಾದರೆ ಅಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಬೇಡ, ಬೇರೆ ಜಾಗದಲ್ಲಿ ಮಾಡಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೆಲ ಮುಖಂಡರು ಮನವಿ ಮಾಡಿದರು. ಆನಂತರ ಜಿಲ್ಲಾಧಿಕಾರಿ,ಎಸ್ಪಿ,ಪ್ಯಾಕ್ಟರಿ ಎಂಡಿ,ತಹಸೀಲ್ದಾರ್ ಜೊತೆಗೂಡಿ ಯತೀಂದ್ರ ಸ್ಥಳ ಪರಿಶೀಲಿಸಿದರು. ಕಾರ್ಮಿಕರ ಪ್ರತಿಭಟನೆ ಅಂತ್ಯ, ನಾಳೆಯಿಂದ ಕೆಲಸಕ್ಕೆ ಹಾಜರುಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಕುರಿತಂತೆ ಗೊಂದಲ ಮುಂದುವರೆದಿದ್ದರೂ ಕಾರ್ಮಿಕರು ಫ್ಯಾಕ್ಟರಿ ಎಂಡಿ ನಜೀರ್ ಖಾಸಿಮ್ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯ ಗೊಳಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಕಾರ್ಖಾನೆ ಆವರಣದಲ್ಲಿ ಯಾವುದೇ ಕಾರಣಕ್ಕೂ ಕ್ರೀಡಾಂಗಣ ನಿರ್ಮಾಣವಾಗುವುದಿಲ್ಲ. ಅದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ಎಲ್ಲರೂ ಪ್ರತಿಭಟನೆ ಅಂತ್ಯ ಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ ಹಿನ್ನೆಲೆ ಎಂಡಿ ಅವರ ಮಾತಿನ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದ್ದು, ನಾಳೆಯಿಂದ ಕೆಲಸಕ್ಕೆ ಹಾಜರಾಗಲಿದ್ದಾರೆ. ಕಳೆದ 15 ದಿನಗಳಿಂದ ಸ್ಥಗಿತ ಗೊಂಡಿದ್ದ ಕಾರ್ಖಾನೆಯಲ್ಲಿ ನೂಲು ತೆಗೆಯುವ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ.ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್, ಕೆಎಸ್ಐಸಿ ಪ್ರಧಾನ ವ್ಯವಸ್ಥಾಪಕ ಮಂಜುಳಾ, ಪಿ ಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾದೇವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಮಾಜಿ ಸದಸ್ಯ ಎಂ. ರಮೇಶ್, ಜಿಪಂ ಮಾಜಿ ಸದಸ್ಯ ಕೆ. ಮಹದೇವ್, ಪುರಸಭಾ ಮಾಜಿ ಅಧ್ಯಕ್ಷ ಎನ್. ಸೋಮು, ಎಸ್. ಮದನ್ ರಾಜ್, ಸಿ. ಪ್ರಕಾಶ್, ಮಾಜಿ ಸದಸ್ಯ ಎಲ್. ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇ ಹುಂಡಿ ಮಹೇಶ್, ಗಣೇಶ್, ಗ್ರಾಪಂ ಮಾಜಿ ಸದಸ್ಯ ಎಂ. ಮಿಥುನ್, ಪುರಿ ನಟರಾಜು, ಹಾಳೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣಾ ನೀತಿ ಸಮರ್ಪಕ ಅನುಷ್ಠಾನದಲ್ಲಿ ಉದಾಸೀನ
ಮಿಡ್ಲ್‌.. 8 ಚದರ ಅಡಿ ಸಿದ್ದರಾಮಯ್ಯ ಭಾವಚಿತ್ರ ಅನಾವರಣ