ಕೊಟ್ಟೂರು: ಪಟ್ಟಣದ ಬೀದಿಬದಿ ತಿಂಡಿ, ಸ್ನಾಕ್ಸ್ ಮತ್ತು ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ, ಆಹಾರಕ್ಕೆ ಬಳಸುವ ಪದಾರ್ಥ ಹಾಗೂ ಕುಡಿಯುವ ನೀರಿನ ಕುರಿತು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಸುರಕ್ಷಾಧಿಕಾರಿ ಉದಯ ಮುದ್ದೇಬಿಹಾಳ ಇತ್ತೀಚಿಗೆ ದಿಢೀರ್ ಭೇಟಿ ನಡೆಸಿ ಪರಿಶೀಲನೆ ನಡೆಸಿದರು.
ಎಗ್ ರೈಸ್, ಗೋಬಿ ಮಂಚೂರಿ, ಪ್ಯಾರಡೈಸ್, ಡಾಬಾಗಳಲ್ಲಿ ಉತ್ತರ ಕರ್ನಾಟಕ ಆಹಾರ ತಿನಿಸುಗಳಲ್ಲಿ ಬಹುತೇಕರು ಕಲರ್, ಟೇಸ್ಟಿಂಗ್ ಪೌಡರ್‌ಗಳನ್ನು ಬಳಸುವುದನ್ನು ತಡೆಯುವುದಕ್ಕಾಗಿ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಎಲ್ಲ ಕಡೆ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಇಟ್ಟಿರಲೇಬೇಕೆಂದು ಖಡಕ್ ಸೂಚನೆ ನೀಡಿದರು. ಅನೇಕ ಕಡೆಗಳಲ್ಲಿ ಸ್ವಚ್ಛತೆಯೇ ಇಲ್ಲದಿರುವುದು ಭೇಟಿ ಸಂದರ್ಭದಲ್ಲಿ ಕಂಡು ಬಂದಿತು. ೧೨ಕ್ಕೂ ಹೆಚ್ಚು ಕಡೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಎಲ್ಲರಿಗೂ, ಆಹಾರ ಸುರಕ್ಷತೆಯ ಪ್ರಮಾಣ ಪತ್ರ ಪಡೆಯುವಂತೆ ತಿಳಿಸಿ ನೋಟಿಸ್ ನೀಡಿದರು.
ಮೊದಲ ಹಂತದಲ್ಲಿ ಎಲ್ಲ ಅಂಗಡಿಯವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ಶುದ್ಧ ಕುಡಿಯುವ ನೀರು ಇಡುವಂತೆ ಸೂಚನೆ ನೀಡಿದ್ದೇವೆ. ನಿಷೇಧಿತ ಕಲರ್, ಗುಣಮಟ್ಟವಿಲ್ಲದ ಸಾಸ್, ಟೇಸ್ಟಿಂಗ್ ಪೌಡರ್ ಬಳಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಪದೇಪದೇ ಭೇಟಿ ನೀಡಲಾಗುವುದು. ಬೀದಿಬದಿ ಅಂಗಡಿ, ಜ್ಯೂಸ್ ಸೆಂಟರ್, ಕೆಲ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಿ ನೋಟಿಸ್ ನೀಡಲಾಗಿದೆ ಎಂದು ಸುರಕ್ಷತಾಧಿಕಾರಿ ಉದಯ್ ಮುದ್ದೇಬಿಹಾಳ ತಿಳಿಸಿದರು.