ಬೆಳೆಹಾನಿಯಾದ ಪ್ರದೇಶಗಳಲ್ಲಿ ಸಂಸದ, ಶಿವಮೊಗ್ಗ ಶಾಸಕರಿಂದ ಪರಿಶೀಲನೆ

KannadaprabhaNewsNetwork | Updated : Nov 12 2023, 01:01 AM IST

ಸಾರಾಂಶ

ರೈತರಿಗೆ ಬರಗಾಲ ಅಧ್ಯಯನ ಸಮಿತಿ ಸಾಂತ್ವನ

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಶಿಕಾರಿಪುರ ತಾಲೂಕಿನಲ್ಲಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ 25 ಸಾವಿರಕ್ಕೂ ಹೆಚ್ಚು ಹಾಗೂ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟರ್ ಬೆಳೆ ಸಂಪೂರ್ಣ ಹಾಳಾಗಿದೆ. ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ಶಿರಾಳಕೊಪ್ಪ ಹತ್ತಿರದ ದ್ರಾಪುರ ಗ್ರಾಮದ ಕುಸಗೂರು ಕ್ರಾಸ್ ಬಳಿ ಗುರುವಾರ ಸಂಜೆ ಆಗಮಿಸಿದ ತಂಡ ಮಳೆಯಲ್ಲಿಯೇ ರಾಜ್ಯ ಬರಗಾಲ ಅಧ್ಯಯನ ಸಮಿತಿ ಭೇಟಿ ನೀಡಿ, ರೈತರ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿ ಕಂಗಾಲಾಗಿರುವ ರೈತರನ್ನು ಭೇಟಿಯಾಗಿ, ಬೆಳೆ ಹಾಳಾದ ರೈತರಿಗೆ ಸಾಂತ್ವನ ಹೇಳಿದರು.

ಈ ದೀಪಾವಳಿ ಸಂದರ್ಭದಲ್ಲಿ ರೈತರು ನಾಲ್ಕು ಕಾಳು ಬೆಳೆಯನ್ನು ಕಾಣುವ ಸಮಯದಲ್ಲಿ ಕಣೀರಿನಿಂದ ಕೈತೊಳೆಯುವಂತಾಗಿದೆ. ಇಂಥ ರೈತರ ನೆರವಿಗೆ ಬಿಜೆಪಿ ಸ್ಪಂದಿಸಲಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸದೇ ರೈತರ ನೆರವಿಗೆ ಧಾವಿಸಬೇಕಿತ್ತು. ಕೇಂದ್ರದಿಂದ ಹಣ ಬರಲಿ ಎನ್ನು ತ್ತಿರುವ ರಾಜ್ಯ ಸರ್ಕಾರ ಈ ಹಿಂದೆ ಯಡಿಯೂರಪ್ಪ ಅವರು ಕೇಂದ್ರ ದಿಂದ ಎಷ್ಟು ಹಣ ಬಂದಿತ್ತೋ, ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಕೊಟ್ಟು ರೈತರಿಗೆ ಸ್ಪಂದಿಸಿತ್ತು. ಜಿಲ್ಲಾ ಸಚಿವರಾದಿಯಾಗಿ ಯಾರೊಬ್ಬರೂ ಈವರೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ. ಶಿಕಾರಿಪುರ ತಾಲೂಕಲ್ಲಿ ಕೆರೆ ತುಂಬಿಸುವ ನೀರಾವರಿ ಯೋಜನೆ ಕೈಗೊಂಡಿದ್ದರೂ ಸಕಾಲಕ್ಕೆ ವಿದ್ಯುತ್ ಕೊಡದೇ ರೈತರು ಜೋಳ ಬೆಳೆಗೆ ನೀರು ಹಾಯಿಸಲು ಆಗುತ್ತಿಲ್ಲ ಎಂದರು.

ಗುರುವಾರ ಸಿಎಂ ಅವರು ರೈತರಿಗೆ 7 ತಾಸು ವಿದ್ಯುತ್‌ ಪೂರೈಸುವುದಾಗಿ ಹೇಳುತ್ತಿದ್ದಾರೆ. ರೈತ ಸಂಪೂರ್ಣ ಬೆಳೆ ಹಾಳಾದ ಮೇಲೆ ವಿದ್ಯುತ್ ಕೊಟ್ಟಂತಾಗಿದೆ. ಮೊದಲೇ ವಿದ್ಯುತ್ ಸೌಲಭ್ಯ ಕೊಟ್ಟಿದ್ದರೆ ರಾಜ್ಯದಲ್ಲಿ 22 ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ ಎಂದರು.

ಅಕ್ರಮ ಸಕ್ರಮದಲ್ಲಿ ಹಣ ಕಟ್ಟಿದ ಜಿಲ್ಲೆಯ 16 ಸಾವಿರ ರೈತರಿಗೆ ವಿದ್ಯುತ್ ಕೊಡದೇ ಈಗ ಸೋಲಾರ ವಿದ್ಯುತ್ ಹಾಕಿಸಿಕೊಳ್ಳಲು ಸಲಹೆ ನೀಡುತ್ತಿದೆ. ರಾಜ್ಯ ಸರ್ಕಾರ ಸರಿಯಾದ ನಿಟ್ಟಿನಲ್ಲಿ ಕೈ ಜೋಡಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

ಬರಗಾಲ ವೀಕ್ಷಣೆ ತಂಡದೊಂದಿಗೆ ಸಂಸದ ರಾಘವೇಂದ್ರ ,ಶಿವಮೊಗ್ಗ ಶಾಸಕ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ,ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದದಲಿಂಗಪ್ಪ, ಗ್ರಾಮದ ಪ್ರಮುಖರಾದ ರಾಮಚಂದ್ರ ನಾಯಕ್, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ, ಅಣ್ಣಪ್ಪ, ಷಣ್ಮುಖಪ್ಪ ಹಲವಾರು ರೈತರು ಹಾಜರಿದ್ದರು.

- - - -11ಕೆಎಸ್‌ಎಚ್‌ಆರ್‌1:

ಶಿರಾಳಕೊಪ್ಪ ಹತ್ತಿರದ ‘ದ್ರಾಪುರ ಗ್ರಾಮದ ಕುಸಗೂರು ಕ್ರಾಸ್ ಬಳಿ ಸಂಪೂರ್ಣ ಬೆಳೆ ಹಾಳಾಗಿರುವದನ್ನು ಬರಗಾಲ ವೀಕ್ಷಣ ಸಮಿತಿ ಸದಸ್ಯರು ಮಳೆಯಲ್ಲೇ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರಕ್ಕೆ ಕಲ್ಪಿಸುವ ಭರವಸೆ ನೀಡಿದರು.

Share this article