ಶರಣ ಸಾಹಿತ್ಯ ಲೇಖಕಿಯರಿಗೆ ಸ್ಪೂರ್ತಿ: ಬರಗೂರು

KannadaprabhaNewsNetwork |  
Published : Jul 01, 2024, 01:46 AM IST
BM Sri | Kannada Prabha

ಸಾರಾಂಶ

ಹನ್ನೆರಡನೆ ಶತಮಾನದಲ್ಲೇ ತಾರತಮ್ಯವನ್ನು ಮೆಟ್ಟಿನಿಂತ ಅಕ್ಕಮಹಾದೇವಿ, ಸಂಕವ್ವೆ ಹಾಗೂ ಕಾಳವ್ವೆ ಅವರಂತಹ ತಳಸಮುದಾಯದ ಶರಣೆಯರ ಸಾಹಿತ್ಯದ ಗಟ್ಟಿತನ ಆಧುನಿಕ ಬರಹಗಾರ್ತಿಯರಿಗೆ ಸ್ಪೂರ್ತಿ ಎಂದು ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹನ್ನೆರಡನೆ ಶತಮಾನದಲ್ಲೇ ತಾರತಮ್ಯವನ್ನು ಮೆಟ್ಟಿನಿಂತ ಅಕ್ಕಮಹಾದೇವಿ, ಸಂಕವ್ವೆ ಹಾಗೂ ಕಾಳವ್ವೆ ಅವರಂತಹ ತಳಸಮುದಾಯದ ಶರಣೆಯರ ಸಾಹಿತ್ಯದ ಗಟ್ಟಿತನ ಆಧುನಿಕ ಬರಹಗಾರ್ತಿಯರಿಗೆ ಸ್ಪೂರ್ತಿ ಎಂದು ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಭಾನುವಾರ ಎನ್‌.ಆರ್‌. ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಲೇಖಕಿಯರಾದ ಬಾನು ಮುಷ್ತಾಕ್‌, ಡಾ। ಎಚ್‌.ಎಸ್‌. ಅನುಪಮಾ ಹಾಗೂ ಪ್ರತಿಭಾ ನಂದಕುಮಾರ್‌ ಅವರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ನೀಡಲಾಗುವ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

ವಚನ ಸಾಹಿತ್ಯದ ಮೂಲಕ ಶರಣೆಯರು ಪುರುಷರ ಪ್ರಾಬಲ್ಯಕ್ಕೆ ಸವಾಲು ಒಡ್ಡಿದರು. ಕಾಯಕ ಹಾಗೂ ದಾಸೋಹ ತತ್ವಕ್ಕೆ ನಿಷ್ಠರಾಗಿ ಸಮಾನತೆಗೆ ಆದ್ಯತೆ ನೀಡಿದರು. ಹೋರಾಟ ಮತ್ತು ಬಂಡಾಯದ ಧ್ವನಿಯಾಗಿ ಸಾಮಾಜಿಕ ಕಳಕಳಿ ತೋರಿದರು. ಸಮಾಜದಲ್ಲಿ ಬದುಕು ಹಾಗೂ ಸಂಸ್ಕೃತಿಯ ಪರಿಕಲ್ಪನೆ ಶ್ರೇಣಿಕೃತವಾಗಿದೆ. ಇಂತಹ ಸಮಾಜದಲ್ಲಿ ವಿವಿಧ ಶ್ರೇಣಿಗೆ ಸಂಬಂಧಿಸಿದ ಅನುಭವಗಳು ವಿಭಿನ್ನವಾಗಿರುವುದು ಸಹಜ. ಹೀಗಾಗಿ, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಂಬ ಪದಗಳನ್ನು ಬಳಸುತ್ತೇವೆಯೇ ಹೊರತು, ಅನುಕಂಪ ಪಡೆಯುವುದಕ್ಕೆ ಅಲ್ಲ ಎಂದರು.

ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಏನು? ಎಂಬ ಪ್ರಶ್ನೆಗೆ ಇಲ್ಲಿ ಪ್ರಶಸ್ತಿ ಪಡೆದಿರುವ ಲೇಖಕಿಯರನ್ನು ತೋರಿಸಬಹುದು. ಲೇಖಕಿಯರ ಸಂಘವು ಮುಂದಿನ ದಿನಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಿದ್ದು, ಧನ ಸಹಾಯ ಕೋರಲಾಗಿದೆ. ಇಂತಹ ಮಹಾನ್‌ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಸಂಧ್ಯಾ ಹೆಗಡೆ ದೊಡ್ಡಹೊಂಡ ಮಾತನಾಡಿ, ಪುಸ್ತಕ ರಚನೆಯಂತಹ ಸವಾಲಿನ ಕಾರ್ಯದಲ್ಲಿ ತೊಡಗಿರುವ ಮಹಿಳಾ ವರ್ಗ ಒಂದೆಡೆಯಾದರೆ. ಮೊಬೈಲ್‌ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗೀಳಿಗೆ ಒಳಗಾಗಿರುವ ಹೆಣ್ಣುಮಕ್ಕಳು, ಭೌತಿಕವಾಗಿ ಕಾಣುವ ದೇಹವೇ ತನ್ನ ಗುರುತು ಎಂಬ ಭ್ರಮೆಯಲ್ಲಿದ್ದಾರೆ. ಇದು ಆಧುನಿಕ ಸಮಾಜವನ್ನು ದುಸ್ಥಿತಿಗೆ ತಲುಪಿಸುವ ಮುನ್ಸೂಚನೆ ಆಗಿರಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ। ಎಚ್‌.ಎಲ್‌.ಪುಷ್ಪಾ, ಅಂಕಿತ ಪುಸ್ತಕ ಪ್ರಕಾಶಕ ಪ್ರಕಾಶ್‌ ಕಂಬತ್ತಳ್ಳಿ ಉಪಸ್ಥಿತರಿದ್ದರು.

ಮಹಿಳಾ ಬರಹಗಾರ್ತಿಯರಿಗೆ ಲೇಖಕಿ, ಪುರುಷರಿಗೆ ಲೇಖಕ ಎನ್ನುವ ಬದಲು ಎಲ್ಲರನ್ನೂ ‘ಲೇಖಕರು’ ಎಂದು ಕರೆಯುವುದು ಉತ್ತಮ. ಹೆಣ್ಣಿನ ಶೋಷಣೆ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಬರೆಯುವುದು ಸೂಕ್ಷ್ಮ ಹಾಗೂ ಸವಾಲಿನ ಕೆಲಸ.

-ಸಂಧ್ಯಾ ಹೆಗಡೆ ದೊಡ್ಡಹೊಂಡ, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ