ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಿ

KannadaprabhaNewsNetwork |  
Published : Sep 23, 2025, 01:06 AM IST
ಅಥಣಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ 33ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ರೈತರನ್ನು ಉದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ಆಗುತ್ತಿರುವ ಮೋಸ ತಡೆಗಟ್ಟಲು ಮತ್ತು ರಾಜ್ಯದಲ್ಲಿ ಬೆರಳೆಣಿಕೆ ಎಷ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂಬರುವ ನವೆಂಬರ್‌ ಅಧಿವೇಶನದಲ್ಲಿ ನಾನು ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯದಲ್ಲಿರುವ ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಪೂರೈಸುವ ರೈತರಿಗೆ ತೂಕದಲ್ಲಿ ಆಗುವ ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದಲೇ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದರು.

ಇಲ್ಲಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸೋಮವಾರ ನಡೆದ ಕಾರ್ಖಾನೆಯ 33ನೇ ವಾರ್ಷಿಕ ಸರ್ವ ಸಾಧರಣ ಸಭೆಯಲ್ಲಿ ಅವರು ಮಾತನಾಡಿದರು. ರೈತರಿಗೆ ಆಗುತ್ತಿರುವ ಮೋಸ ತಡೆಗಟ್ಟಲು ಮತ್ತು ರಾಜ್ಯದಲ್ಲಿ ಬೆರಳೆಣಿಕೆ ಎಷ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂಬರುವ ನವೆಂಬರ್‌ ಅಧಿವೇಶನದಲ್ಲಿ ನಾನು ಪ್ರತಿಭಟನೆಗೂ ಸಿದ್ಧ ಎಂದು ಹೇಳಿದರು.

ಖಾಸಗಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟ್ರ್ಯಾಕ್ಟರ್‌ನಿಂದ ಕಬ್ಬಿನಲ್ಲಿ ಎರಡು ಟನ್‌ನಷ್ಟು ತೂಕದಲ್ಲಿ ಮೋಸ ಮಾಡುತ್ತಿದ್ದು, ಇದರಿಂದ ಕಾರ್ಖಾನೆಯವರು ಕನಿಷ್ಠ ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸುವ ರೈತರ ಕಬ್ಬನ್ನು ಕಾರ್ಖಾನೆಯಿಂದ ಮರಳಿ ಕಳಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ರೈತರಿಗೆ ದೊಡ್ಡ ಮಟ್ಟದ ಮೋಸವಾಗಲಿದೆ. ಈ ಬಗ್ಗೆ ನಾನು ಸದನದಲ್ಲಿ ಹಿಂದಿನ ಸರ್ಕಾರಗಳಿಗೆ ಪಕ್ಷಾತೀತವಾಗಿ ಚರ್ಚಿಸಿ ಕೆಲವು ಸಲಹೆ ನೀಡಿದ್ದೇನೆ. ಆದರೆ ಇನ್ನೂವರೆಗೆ ಪ್ರತಿ ಸಕ್ಕರೆ ಕಾರ್ಖಾನೆಯ ಆವರಣದ ಮುಂಭಾಗದಲ್ಲಿ ಸರ್ಕಾರದಿಂದಲೇ ತೂಕದ ಯಂತ್ರಗಳನ್ನು ಅಳವಡಿಸಿ ರೈತರಿಗೆ ಆಗುವ ಮೋಸವನ್ನು ತಡೆಗಟ್ಟಬೇಕಾಗಿತ್ತು. ಮುಂಬರುವ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿಯಾದರೂ ರೈತರಿಗೆ ನ್ಯಾಯ ಕೊಡಿಸುತ್ತೇನೆ ಎಂದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯೂ ರೈತರ ಕಾರ್ಖಾನೆಯಾಗಿದ್ದು, ಕಳೆದ ನಾಲ್ಕು ಐದು ವರ್ಷಗಳಿಂದ ನಾನು ಮತ್ತು ಕಾಗವಾಡ ಶಾಸಕ ರಾಜು ಕಾಗೆ ಯಾವುದೇ ಹಸ್ತಕ್ಷೇಪ ಮಾಡದೆ ಆಡಳಿತ ಮಂಡಳಿಯವರಿಗೆ ಕಾರ್ಖಾನೆ ಪ್ರಗತಿ ಮತ್ತು ರೈತರಿಗೆ ನ್ಯಾಯಯುತ ಬೆಲೆ ನೀಡಲು ಸ್ವಾತಂತ್ರ್ಯ ನೀಡಿದ್ದೇವೆ ಎಂದರು. ಆಡಳಿತ ಮಂಡಳಿಯವರು ಪ್ರಗತಿಪರ ರೈತರು, ಟ್ರ್ಯಾಕ್ಟರ್‌ ಮಾಲೀಕರು, ಕಬ್ಬು ಕಟಾವು ಮಾಡುವವರು ಸೇರಿದಂತೆ 11 ಜನರ ಸಲಹಾ ಸಮಿತಿ ರಚಿಸಿಕೊಂಡು ಅವರ ಸಲಹೆಯಂತೆ ಕಾರ್ಖಾನೆ ಮುನ್ನಡೆಸಬೇಕು. ರೈತರಿಗೆ ಕಬ್ಬು ಪೂರೈಸಿದ ಎರಡು ತಿಂಗಳಲ್ಲಿ ನ್ಯಾಯಯುತ ದರ ನೀಡುವ ವ್ಯವಸ್ಥೆ ಮಾಡಬೇಕು ಎಂದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಕಾರ್ಖಾನೆಯ ಪ್ರಗತಿಯಲ್ಲಿ ಯಾವುದೇ ರಾಜಕೀಯ ಬೇಡ, ಇದು ರೈತರ ಕಟ್ಟಿದ ಕಾರ್ಖಾನೆಯಾಗಿದ್ದು, ಸಹಕಾರಿ ತತ್ವದ ಮೇಲೆ ಮುನ್ನಡೆಯುತ್ತಿದೆ ಎಂದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, 2025-26ನೇ ಸಾಲಿನಲ್ಲಿ 8 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿ 9 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಈ ಸಕ್ಕರೆಯಿಂದ ₹13.50 ಕೋಟಿ ಲಾಭ ಬರಲಿದೆ. ಆದರೆ ಕಳೆದ ವರ್ಷದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸದೆ ಕಡಿಮೆ ಇಳುವರಿ ಬಂದ ಕಾರಣ ಕೇವಲ 4 ಲಕ್ಷ ಟನ್ ನಷ್ಟು ಕಬ್ಬನ್ನು ನುರಿಸಲಾಗಿದೆ. ವಿವಿಧ ಕಾರಣಗಳಿಂದ ನಮ್ಮ ಕಾರ್ಖಾನೆಗೆ ₹34 ಕೋಟಿ ನಷ್ಟ ಉಂಟಾಗಿದೆ. ಬರುವ ಹಂಗಾಮಿಗೆ ನಮ್ಮ ರೈತರು ಅತಿ ಹೆಚ್ಚು ಗುಣಮಟ್ಟದ ಕಬ್ಬು ಸರಬರಾಜ ಮಾಡಿದರೆ 8 ಲಕ್ಷ ಟನ್‌ ಕ್ಕಿಂತ ಅಧಿಕ ಕಬ್ಬನ್ನು ನುರಿಸುತ್ತೇವೆ ಎಂದ ಅವರು ವಾರ್ಷಿಕ ವರದಿ ಸಭೆಗೆ ನೀಡಿ ಒಪ್ಪಿಗೆ ಪಡೆದರು.

ಈ ವೇಳೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜಿ ಎಮ್ ಪಾಟೀಲ ಸೇರಿ ಅನೇಕ ರೈತರು ಇದ್ದರು. ಗೂಳಪ್ಪ ಜತ್ತಿ ಸ್ವಾಗತಿಸಿದರು. ಸುರೇಶ ಠಕ್ಕಣ್ಣವರ ನಿರೂಪಿಸಿ, ಎಸ್.ಬಿ. ಗೋಟಖಿಂಡಿ ವಂದಿಸಿದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ