ಮಹಿಷವಾಡಗಿ ೮ನೇ ಪಿಲ್ಲರ್ ಬುನಾದಿ ಅಳವಡಿಕೆ ಯಶಸ್ವಿ

KannadaprabhaNewsNetwork |  
Published : May 30, 2026, 04:00 AM IST
ರಬಕವಿ-ಮಹಿಷವಾಡಗಿ ೮ನೇ ಪಿಲ್ಲರ್ ಬುನಾದಿ ಅಳವಡಿಕೆ ಯಶಸ್ವಿ! | Kannada Prabha

ಸಾರಾಂಶ

ಮಹಿಷವಾಡಗಿ ಸೇತುವೆಯ ಪಿಲ್ಲರ್‌ಗಳ ಪ್ರದೇಶದ ಸುತ್ತ ಝರಿ ನೀರು ಸಂಗ್ರಹವಾಗದಂತೆ ಸುತ್ತೆಲ್ಲ ಎರಿಮಣ್ಣು ಹಾಕಿ ನೀರು ಸತತ ಹೊರಹಾಕುವಲ್ಲಿ ವಿಫಲವಾಗಿದ್ದ ಅಭಿಯಂತರರು ಹಾಗೂ ಕಾರ್ಮಿಕರು ಗುರುವಾರ ಬೆಳಗ್ಗೆಯಿಂದ ಎರಡು ಬೃಹತ್ ಜನರೇಟರ್ ಬಳಸಿ ಆರು ಪೈಪ್‌ಗಳ ಮೂಲಕ ಕಾಮಗಾರಿ ನಡೆಸುವ ಗುಂಡಿಯಿಂದ ನೀರು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಿಷವಾಡಗಿ ಸೇತುವೆಯ ಪಿಲ್ಲರ್‌ಗಳ ಪ್ರದೇಶದ ಸುತ್ತ ಝರಿ ನೀರು ಸಂಗ್ರಹವಾಗದಂತೆ ಸುತ್ತೆಲ್ಲ ಎರಿಮಣ್ಣು ಹಾಕಿ ನೀರು ಸತತ ಹೊರಹಾಕುವಲ್ಲಿ ವಿಫಲವಾಗಿದ್ದ ಅಭಿಯಂತರರು ಹಾಗೂ ಕಾರ್ಮಿಕರು ಗುರುವಾರ ಬೆಳಗ್ಗೆಯಿಂದ ಎರಡು ಬೃಹತ್ ಜನರೇಟರ್ ಬಳಸಿ ಆರು ಪೈಪ್‌ಗಳ ಮೂಲಕ ಕಾಮಗಾರಿ ನಡೆಸುವ ಗುಂಡಿಯಿಂದ ನೀರು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ. ನೀರು ಖಾಲಿಯಾಗುತ್ತಿದ್ದಂತೆಯೇ ಬೆಳಗ್ಗೆಯಿಂದಲೇ ಪಿಲ್ಲರ್‌ನಲ್ಲಿ ಕಾಂಕ್ರೀಟ್ ಹಾಕಲು ಅಗತ್ಯ ಸರಳುಗಳನ್ನು ಬಿಗಿದು ಸಿದ್ಧಪಡಿಸಿದ್ದರಿಂದ ರಾತ್ರಿ ೧೧ ಗಂಟೆ ಸುಮಾರಿಗೆ ೮ನೇ ಪಿಲ್ಲರ್‌ಗೆ ಕಾಂಕ್ರೀಟ್ ಹಾಕುವ ಪ್ರಕ್ರಿಯೆ ಸಫಲವಾಗಿದೆ. ಬುಧವಾರದ ಸಭೆಯಲ್ಲಿ ಚರ್ಚಿತ ವಿಷಯ ಠುಸ್ ಆಗಿದ್ದು, ನದಿ ಪಾತ್ರದಲ್ಲಿನ ನೀರು ಕಡಿತಗೊಳಿಸುವ ತಜ್ಞರ ನಿರ್ಧಾರ ತಪ್ಪಿಹೋಗಿ ಇದೀಗ ನದಿ ಪಾತ್ರದ ಜನತೆ ನಿರಾಳವಾಗಿದ್ದಾರೆ. ಸದ್ಯ ೮ನೇ ಪಿಲ್ಲರ್‌ ಮೇಲಿನ ಕಾಂಕ್ರೀಟ್ ಹಾಕಿದ ಬಳಿಕ ೭ನೇ ಪಿಲ್ಲರ್‌ನ ಬುನಾದಿ ಭದ್ರತೆ ಬಗ್ಗೆ ಅಭಿಯಂತರರು ಖಾತ್ರಿ ಪಡಿಸಿಕೊಳ್ಳಲಿದ್ದು, ಎರಡು ದಿನಗಳಲ್ಲಿ ಈ ಪಿಲ್ಲರ್ ಅಳವಡಿಕೆಯೂ ಆರಂಭಗೊಳ್ಳಲಿದೆ. ದಶಕಗಳಿಂದ ಹಿಂದೆಂದೂ ಕಂಡರಿಯದಷ್ಟು ನದಿ ನೀರು ಇಳಿಕೆಯಾಗಿದ್ದು, ೭ನೇ ಪಿಲ್ಲರ್ ಬುನಾದಿ ಅಳವಡಿಕೆ ಸಾಧ್ಯವಾದರೆ ಮೇಲ್ಭಾಗದ ಸೇತುವೆ ಕಾಮಗಾರಿ ಸರಾಗಗೊಳ್ಳಲಿದೆ. ಕಾಲ ವ್ಯಯವಾದಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಆಗಿ ನದಿ ಪಾತ್ರಕ್ಕೆ ಹೊಸ ನೀರು ಸೇರ್ಪಡೆಗೊಂಡಲ್ಲಿ ಕಾಮಗಾರಿ ನಡೆಸುವುದು ಅಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ಹಿಪ್ಪರಗಿ ಜಲಾಶಯದ ಕ್ರಸ್ಟ್‌ಗೇಟ್‌ ಮುರಿದು ೨೧ನೇ ಗೇಟ್‌ ದುರಂತದಂತೆ ಮುಂದೆಯೂ ಪುನಾವರ್ತನೆಗೊಂಡಲ್ಲಿ ಮಾತ್ರ ನದಿ ನೀರು ದಾಖಲೆಯ ಮಟ್ಟದಲ್ಲಿ ಕಡಿತಗೊಂಡು ಕಾಮಗಾರಿ ನಡೆಸಲು ಸಾಧ್ಯವಾಗುತ್ತದೆ.

ಮುಂಬರುವ ದಿನಗಳಲ್ಲಿ ಹಿಪ್ಪರಗಿ ಜಲಾಶಯದ ಹಿಂದಿನ ನದಿಪಾತ್ರದ ನೀರು ಖಾಲಿಯಾಗುವ ನಿರೀಕ್ಷೆ ಸಾಧ್ಯವಾಗದ ಕಾರಣ ಅಭಿಯಂತರರು ಯಾವುದೇ ಒತ್ತಡಕ್ಕೆ ಇಲ್ಲವೇ ಸ್ವಯಂಘೋಷಿತ ನೀರಾವರಿ ತಜ್ಞರ ಪ್ರಭಾವಕ್ಕೆ ಒಳಗಾಗದೇ ಇದೀಗ ಬಳಸಿದ ತಂತ್ರವನ್ನೇ ಬಳಸಿ ಜನ-ಜಾನುವಾರುಗಳ ಹಿತ ಲಕ್ಷಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ನಾಗರಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ