ಈ ಬಾರಿ 42ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ ವತಿಯಿಂದ ಗಣಪತಿ ಮುಖವುಳ್ಳ ಮೂರ್ತಿ ಜೊತೆಗೆ ಆಂಜನೇಯ, ಗರುಡ ಹಾಗೂ ನರಸಿಂಹ, ವರಹ ಮುಖಗಳನ್ನು ಒಳಗೊಂಡಿರುವ 7 ಅಡಿ ಎತ್ತರದ ಬೃಹತ್ ಮಣ್ಣಿನ ಹೇರಂಬ ಪಂಚಮುಖಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರ
ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ 42ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಮುದ್ಗಲ್ ಪುರಾಣದ ಹೇರಂಬ ಪಂಚಮುಖಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದೆ.
ನಗರದ ಛತ್ರದ ಬೀದಿಯಲ್ಲಿ ಸೇವಾ ಸಂಘ ಮತ್ತು ಬಳಗದ ವತಿಯಿಂದ ಪ್ರತಿವರ್ಷ ಆಯಾಯ ಸನ್ನಿವೇಶಕ್ಕೆ ತಕ್ಕಂತೆ ವೈವಿಧ್ಯಮಯವಾದ ಬೃಹತ್ ಗಾತ್ರದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡಿ, ಹಲವು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಾ ಬಂದಿದೆ.
7ಅಡಿ ಎತ್ತರದ ಮಣ್ಣಿನ ಮೂರ್ತಿ :
ಈ ಬಾರಿ 42ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ ವತಿಯಿಂದ ಗಣಪತಿ ಮುಖವುಳ್ಳ ಮೂರ್ತಿ ಜೊತೆಗೆ ಆಂಜನೇಯ, ಗರುಡ ಹಾಗೂ ನರಸಿಂಹ, ವರಹ ಮುಖಗಳನ್ನು ಒಳಗೊಂಡಿರುವ 7 ಅಡಿ ಎತ್ತರದ ಬೃಹತ್ ಮಣ್ಣಿನ ಹೇರಂಬ ಪಂಚಮುಖಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.
ಗಣೇಶನ ರೂಪಗಳಲ್ಲೇ ಪಂಚಮುಖಿ ಗಣೇಶನ ರೂಪ ತುಂಬಾನೇ ಶ್ರೇಷ್ಠವಾದುದ್ದಾಗಿದೆ. ಪಂಚಮುಖಿ ಗಣೇಶನೆಂದರೆ 5 ವಿವಿಧ ಮುಖವುಳ್ಳ ಗಣೇಶನ ರೂಪವೇ ಆಗಿದ್ದು, ಪಂಚಮುಖಿ ಗಣೇಶನ 5 ಮುಖಗಳು 5 ರೀತಿಯ ಮಹತ್ವವನ್ನು ಹೊಂದಿರುತ್ತದೆ. ಆದರೆ, ಮೂಲ ಮುದ್ಗಲ್ ಪುರಾಣದ ಹೇರಂಬ ಪಂಚಮುಖಿ ಗಣಪತಿ ಮೂರ್ತಿ ವಿಭಿನ್ನವಾಗಿದೆ. ಸಿಂಹದ ಮೇಲೆ ಆಸೀನನಾಗಿರುವ ಗಣಪತಿ ಮೂರ್ತಿಯ ಶಿರದ ಬಲ ಬದಿಯಲ್ಲಿ ಆಂಜನೇಯ, ಗರುಡು ಹಾಗೂ ಎಡ ಬದಿಯಲ್ಲಿ ನರಸಿಂಹ, ವರಹ ಮುಖವುಳ್ಳ ಮೂರ್ತಿಗಳಿವೆ.
ವಿಭಿನ್ನ ಮಾದರಿ:
ಛತ್ರದ ಬೀದಿಯಲ್ಲಿ ಗಣೇಶೋತ್ಸವವನ್ನು ವರ್ಷದಿಂದ ವರ್ಷಕ್ಕೆ ವೈವಿಧ್ಯಮಯವಾಗಿ ಆಚರಿಸುತ್ತಾ ಕಳೆದ 41 ವರ್ಷಗಳಿಂದ ಸತತವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಗಣೇಶ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಹೊಸ ಪ್ರಯೋಗದೊಂದಿಗೆ ಮೋದಕ ಪ್ರಿಯನ ಅನೇಕ ರೂಪಗಳ ದರ್ಶನ ಭಾಗ್ಯ ದೊರಕಿಸಿ ಭಕ್ತಾದಿಗಳಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಸೇವಾ ಸಂಘವು ಶ್ರಮಿಸುತ್ತಿದೆ.
ಸೇವಾ ಸಂಘ 25ನೇ ವರ್ಷದ ಪ್ರಯುಕ್ತ ವೆಂಕಟರಣಮಸ್ವಾಮಿ ರೂಪ ತಾಳಿದ ಗಣಪತಿ ಜೊತೆಗೆ 24 ವರ್ಷಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಭಿನ್ನ ಮಾದರಿಯ ಗಣಪತಿ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದರು. ಆನಂತರ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಿಷ್ಣು ಗಣಪತಿ ಪ್ರಧಾನ ಮೂರ್ತಿಯ ಜೊತೆಗೆ ಮುದ್ಗಲ ಪುರಾಣದಲ್ಲಿ ಬರುವ 32 ಬಗೆಯ ಬಾಲಗಣಪತಿ ಮೂರ್ತಿಗಳ ಸಮೇತ ಶ್ರೀ ಲಕ್ಷ್ಮಿ, ಸರಸ್ವತಿ, ವೆಂಕಟೇಶ್ವರ, ಶ್ರೀರಾಮ, ಶ್ರೀ ಕೃಷ್ಣ, ಹನುಮಂತ, ಮಂಜುನಾಥ, ಶಿವ ಪಾರ್ವತಿ, ಅಯ್ಯಪ್ಪ, ಸುಬ್ರಹ್ಮಣ್ಯ, ಸಾಯಿಬಾಬಾ, ಅನಂತ ಪದ್ಮನಾಭ, ಬ್ರಹ್ಮ, ರಾಘವೇಂದ್ರ, ಪಾಂಡುರಂಗ, ಅನ್ನಪೂರ್ಣೇಶ್ವರಿ, ಕಾವೇರಿಮಾತೆ ಸೇರಿದಂತೆ ಸುಮಾರು 29 ವಿವಿಧ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ಕೋವಿಡ್‌ನಲ್ಲಿ ವಿಜೃಂಭಣೆಗೆ ಅಡ್ಡಿ:
ಸೇವಾ ಸಂಘದ ವತಿಯಿಂದ ನಡೆಯುವ ಅದ್ಧೂರಿ ಗಣೇಶೋತ್ಸವಕೆ ಕೋವಿಡ್-19 ಸಂದರ್ಭದಲ್ಲಿ ಅಡ್ಡಿ ಉಂಟಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಅಂದು ಸಣ್ಣ ಗಾತ್ರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ 42ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯದಲ್ಲಿಯೇ ಮೊದಲ ಬಾರಿ ಎನ್ನಲಾದ ಹೇರಂಬ ಪಂಚಮುಖಿ ಗಣಪತಿಯನ್ನು ಸೇವಾ ಸಂಘ ಕೂರಿಸುತ್ತಿದೆ. ಮಾಗಡಿಯ ಕಲಾವಿದ ಉಮಾಶಂಕರ್ ಅವರ ಕೈಚಳಕದಲ್ಲಿ ಹೇರಂಬ ಪಂಚಮುಖಿ ಗಣಪತಿ ಮೂರ್ತಿ ತಯಾರಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ವೈ.ರವೀಂದ್ರ ಹೇರ್ಳೆ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಪೂಜಾ ಕಾರ್ಯಕ್ರಮ :
ಸೆ.14ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಪ್ರತಿಷ್ಟಾಪನಾ ಪೂಜಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಲಿದ್ದು, ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಾ.ಸಿ.ಎನ್. ಮಂಜುನಾಥ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್, ಜಿಬಿಡಿಎ ಅಧ್ಯಕ್ಷ ನಟರಾಜ್, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಗೌತಮ್‌ಗೌಡ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಸದಸ್ಯರಾದ ಮುತ್ತುರಾಜು, ಸೋಮಶೇಖರ್, ಮಹಾಲಕ್ಷ್ಮಿ, ಮಂಜುಳಾ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಜಿಲಾಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಆರ್.ಕೆ.ಬೈರ ಲಿಂಗಯ್ಯ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ತಹಸೀಲ್ದಾರ್ ತೇಜಸ್ವಿನಿ, ನಗರಸಭೆ ಆಯುಕ್ತ ಡಾ.ಜಯಣ್ಣ, ಸಮಾಜ ಸೇವಕರಾದ ಜಿ.ಪಿ.ಪ್ರಶಾಂತ್, ಕೆ.ಆರ್.ನಾಗೇಶ್, ಕೆ.ಆರ್.ಪ್ರದೀಪ್, ಲಕ್ಷ್ಮಣ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.