- 100*200 ಅಡಿ ಅಳತೆ ಪೆಂಡಾಲ್ । ಕೊಲ್ಕತ್ತಾದಿಂದ ಕಲಾವಿದರಿಂದ ಕಾಮಗಾರಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ 7ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಪ್ರಯುಕ್ತ ಧ್ವಜಸ್ತಂಭದ ಪೂಜಾ ಕಾರ್ಯವನ್ನು ಭಾನುವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ನೆರವೇರಿಸಲಾಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ರೈತರಿಗೆ ಸೂಕ್ತ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಬಂದಿರುವ ಗಣೇಶ ಮಹೋತ್ಸವವನ್ನು ಎಲ್ಲರೂ ಪಕ್ಷಾತೀತವಾಗಿ ಸೇರಿ ಆಚರಿಸಿ, ಯಶಸ್ವಿಗೊಳಿಸೋಣ ಎಂದು ಹಾರೈಸಿದರು.
ಟ್ರಸ್ಟ್ ಅಧ್ಯಕ್ಷ ಗುರು ಜೊಳ್ಳಿ ಮಾತನಾಡಿ, ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ನಗರದಲ್ಲಿ 7ನೇ ವರ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಆಗುತ್ತಿದೆ. ಈ ಹಿನ್ನೆಲೆ ಮಂಟಪ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ಈ ಬಾರಿ ವಿಶೇಷವಾಗಿ ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಗಣಪತಿ ಮಂಟಪ ನಿರ್ಮಿಸಲಾಗುವುದು. 100*200 ಅಡಿ ಅಳತೆಯ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಕೊಲ್ಕತ್ತಾದಿಂದ ಕಲಾವಿದರು ಆಗಮಿಸುತ್ತಿದ್ದು, ಗುರುವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳ ದೇವಸ್ಥಾನಗಳ ಮಾದರಿಯಲ್ಲಿ ಪ್ರತಿವರ್ಷ ಗಣಪತಿ ಮಂಟಪ ನಿರ್ಮಿಸಲಾಗುತ್ತಿದೆ. ಅಷ್ಟು ದೂರಕ್ಕೆ ಹೋಗಲಾಗದ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜನರು ಇಲ್ಲಿಯೇ ಅಂತಹ ಕ್ಷೇತ್ರಗಳನ್ನು ಕಣ್ತುಂಬಿಕೊಂಡು ಪುನೀತರಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
- - - -28ಕೆಡಿವಿಜಿ39, 40ಃ:
ದಾವಣಗೆರೆಯಲ್ಲಿ ಭಾನುವಾರ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಪ್ರಯುಕ್ತ ಧ್ವಜಸ್ತಂಭದ ಪೂಜಾ ಕಾರ್ಯವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಇತರ ಗಣ್ಯರು ನೆರವೇರಿಸಿದರು.