ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಸದ್ಗುರು ಜಗ್ಗಿ ವಾಸುದೇವ್ ರವರು ತಾಲೂಕಿನ ಆವಲಗುರ್ಕಿಯ ಈಶಾ ಪೌಂಡೇಶನ್ ನ 112 ಅಡಿ ಎತ್ತರದ ಆದಿಯೋಗಿ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ ಮಹಾಶೂಲ ಮತ್ತು ನಂದಿಯನ್ನು ಸಂಕ್ರಾಂತಿ ದಿನವಾದ ಸೋಮವಾರ ಪ್ರತಿಷ್ಠಾಪಿಸಿದರು.
ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಸಾವಿರಾರು ಭಕ್ತರ ಸೇರಿದ್ದರು. 21 ಅಡಿಗಳ ನಂದಿ ಮತ್ತು 54 ಅಡಿ ಎತ್ತರದ ಮಹಾಶೂಲವು, ಸದ್ಗುರು ಸನ್ನಿಧಿಯಲ್ಲಿರುವ 112 ಅಡಿಗಳ ಆದಿಯೋಗಿಯ ಭವ್ಯತೆ ಮತ್ತು ಅನುಗ್ರಹವನ್ನು ಇಮ್ಮಡಿಗೊಳಿದೆ.
ಹೊಸದಾಗಿ ಪ್ರತಿಷ್ಠಾಪನೆಯಾದ ಸ್ಥಳಗಳನ್ನು ಸಾರ್ವಜನಿಕ ದರ್ಶನಕ್ಕೆ ತೆರೆಯುವ ಮುನ್ನ, ಪ್ರತಿಷ್ಠಾಪನೆಯಲ್ಲಿ ಭಾಗಿಯಾದವರು, ನಂದಿಗೆ ಎಣ್ಣೆಯನ್ನು ಅರ್ಪಿಸಿದರು. ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಆದಿಯೋಗಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ಮಾದೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಕಂಸಾಳೆ ನೃತ್ಯದಿಂದಾಗಿ, ಮನಮೋಹಕ ಸಾಂಸ್ಕೃತಿಕ ಸಂಜೆಯ ವೈಭವಕ್ಕೆ ಮತ್ತಷ್ಟು ಕಳೆಯೇರಿತು. ಕಾಯುವಿಕೆಯ ಸಂಕೇತ ನಂದಿ
ಈ ವೇಳೆ ಭಕ್ತರನ್ನುದ್ದೇಶಿಸಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ಪ್ರತಿಯೊಂದು ಶಿವ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು. ನಂದಿಯು ಅವಿರತ ಕಾಯುವಿಕೆಯ ಸಂಕೇತವಾಗಿದೆ, ಸುಮ್ಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥನಾಗಿರುತ್ತಾರೆ.
ಜನರು ಯಾವಾಗಲೂ ಧ್ಯಾನವನ್ನು ಒಂದು ರೀತಿಯ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆಧರೆ ಇದು ಒಂದು ಗುಣಧರ್ಮ. ಪ್ರಾರ್ಥನೆ ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ ಎಂದರು.
ಮಹಾಶೂಲ (ಶಿವನ ತ್ರಿಶೂಲ) ಮಾತಾಡುತ್ತಾ, “ಇಡೀ ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ - ಸೃಷ್ಟಿ, ಸ್ಥಿತಿ ಮತ್ತು ಲಯ. ಭಾರತೀಯ ಸಂಸ್ಕೃತಿಯಲ್ಲಿ, ನಾವು ಈ ಮೂರು ಶಕ್ತಿಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎನ್ನುತ್ತೇವೆ.
ಬ್ರಹ್ಮವು ಹುಟ್ಟಿನ ಬಗ್ಗೆಯಾದರೆ, ವಿಷ್ಣುವು ಅಸ್ತಿತ್ವದ ನಿರ್ವಹಣೆ ಮತ್ತು ಶಿವ ವಿನಾಶದ ಬಗ್ಗೆ. ಆದಾಗ್ಯೂ, ಮೂಲ ರೂಪದಲ್ಲಿ ಈ ಮೂರು ಕೇವಲ ಒಂದೇ, ಏಕೆಂದರೆ ಸೃಷ್ಟಿ ಮತ್ತು ನಿರ್ವಹಣೆ ಕೇವಲ ವಿನಾಶತೆಯ ಮಡಿಲಲ್ಲೇ ಅಸ್ತಿತ್ವದಲ್ಲಿದೆ.
ಅದೇ ಮಹಾಶೂಲದ ಮಹತ್ವ – ಮೇಲ್ನೋಟಕ್ಕೆ ಈ ಮೂರು ಬೇರೆ ಬೇರೆಯಾಗಿ ತೋರಿದರೂ, ನಿಜ ರೂಪದಲ್ಲಿ ಎಲ್ಲವೂ ಒಂದೇ ಎಂಬುದನ್ನು ನಿರಂತರವಾಗಿ ಸೂಚಿಸುವುದು.” ಎಂದರು.
ಎಲ್ಲಾ ವಯೋಮಾನದವರಲ್ಲಿ ಬಹು ಜನಪ್ರಿಯವಾಗಿರುವ ವರ್ಣರಂಜಿತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ, ದೈನಂದಿನ ಆದಿಯೋಗಿ ದಿವ್ಯದರ್ಶನದ ಜೊತೆಗೆ ಸನ್ನಿಧಿಯಲ್ಲಿ ಸಂದರ್ಶಕರು ವಿಶೇಷ ಲೇಸರ್ ಪ್ರದರ್ಶನದ ಆನಂದವನ್ನು ಅನುಭವಿಸಿದರು.
ಸಿಕೆಬಿ-9 ಚಿಕ್ಕಬಳ್ಳಾಪುರ ಈಶಾ ಆದಿಯೋಗಿ ಸದ್ಗುರು ಸನ್ನಿಧಿಯಲ್ಲಿ ಪ್ರತಿಷ್ಠಾಪನೆಯಾದ ಮಹಾಶೂಲ ಮತ್ತು ನಂದಿ.