484 ಕಡೆಗಳಲ್ಲಿ ರತಿ-ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ

KannadaprabhaNewsNetwork | Published : Mar 25, 2024 12:49 AM

ಸಾರಾಂಶ

ಒಟ್ಟು ಐದು ದಿನಗಳ ವರೆಗೆ ನಡೆಯುವ ಹೋಳಿಹಬ್ಬಕ್ಕೆ ನಗರದ ಕಮರಿಪೇಟೆ, ದಾಜಿಬಾನಪೇಟೆ, ಮೇದಾರ ಓಣಿ, ಹೊಸ ಮೇದಾರ ಓಣಿ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ದುರ್ಗದ ಬೈಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಂಗುರಂಗಿನ ಹೋಳಿ ಹಬ್ಬದ ಆಚರಣೆಗೆ ಹು-ಧಾ ಮಹಾನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸೋಮವಾರ ಒಟ್ಟು 484 ಕಡೆಗಳಲ್ಲಿ ಸಾರ್ವಜನಿಕ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಒಟ್ಟು ಐದು ದಿನಗಳ ವರೆಗೆ ನಡೆಯುವ ಹೋಳಿಹಬ್ಬಕ್ಕೆ ನಗರದ ಕಮರಿಪೇಟೆ, ದಾಜಿಬಾನಪೇಟೆ, ಮೇದಾರ ಓಣಿ, ಹೊಸ ಮೇದಾರ ಓಣಿ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ದುರ್ಗದ ಬೈಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಉಳಿದಂತೆ ಗ್ರಾಮೀಣ ಮತ್ತು ಶಹರ ಪ್ರದೇಶ ನಿವಾಸಿಗಳು ತಮ್ಮ ಓಣಿಯಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಧಹನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಹೋಳಿ ಹುಣ್ಣಿಮೆಯು ಕೇವಲ ಬಣ್ಣದಾಟಕ್ಕೆ ಸೀಮಿತವಾಗಿಲ್ಲ. ಹಳೇ ಮೇದಾರ ಓಣಿ ಕಾಮಣ್ಣ ಹೆಚ್ಚು ಪ್ರಸಿದ್ಧಿ ಹೊಂದಿದೆ. ಇಲ್ಲಿ ಹಲವು ವರ್ಷಗಳಿಂದ ಸಂಪೂರ್ಣ ಬಿದಿರಿನಿಂದ 18 ಅಡಿ ಎತ್ತರ ಹಾಗೂ 17 ಅಡಿ ಅಗಲದ ಕಾಮಣ್ಣನನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹೊಸ ಮೇದಾರ ಓಣಿಯಲ್ಲಿಯೂ ಬೃಹತ್ ಕಾಮಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇನ್ನು ತಾಡಪತ್ರಿ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಮೂರ್ತಿಗಳು 100 ವರ್ಷಕ್ಕೂ ಹಳೆಯ ಮೂರ್ತಿಗಳಾಗಿವೆ. ಇಲ್ಲಿ ನಿತ್ಯ ಕಾಮಣ್ಣನಿಗೆ ವಿಶೇಷ ಪೂಜೆ ನೆರವೇರುತ್ತದೆ.

ಅದೇ ರೀತಿ ಹಳೆ ಚನ್ನಪೇಟ, ಹಳೆ ದುರ್ಗದಬೈಲ್, ತಿಮ್ಮಸಾಗರ ಓಣಿ, ಅಂಗಡಿ ಗಲ್ಲಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಜಗ್ಗಲಗಿ ಬಾರಿಸುವ ಸ್ಪರ್ಧೆ ನಡೆಯಲಿದೆ. ಹೆಗ್ಗೇರಿ, ಉಣಕಲ್, ವಿದ್ಯಾನಗರ, ಆಸಾರ ಓಣಿ, ಆನಂದನಗರ, ನವನಗರ ಸೇರಿದಂತೆ ನಗರಾದ್ಯಂತ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಚರ್ಮದ ವಾದ್ಯಗಳು ಕಣ್ಮರೆಯಾಗುತ್ತಿದ್ದು, ಪ್ಲಾಸ್ಟಿಕ್ ಹಲಗೆಯ ಅಬ್ಬರ ಜೋರಾಗಿದೆ. ಮಕ್ಕಳ ಕೈಯಿಂದ ಪ್ಲಾಸ್ಟಿಕ್ ಹಲಗೆಯ ಸದ್ದು ಎಲ್ಲೆಂದರಲ್ಲಿ ಕೇಳಿಬರುತ್ತಿದೆ.

ಗ್ರಾಮೀಣ ಭಾಗದಲ್ಲೂ ರಂಗು:

ಹೋಳಿ ಹುಣ್ಣಿಮೆ ಅಂಗವಾಗಿ ಗ್ರಾಮೀಣ ಪ್ರದೇಶದ ಹುಡುಗರು ಕುಳ್ಳು (ದನದ ಸೆಗಣಿಯಿಂದ ಮಾಡಿದ್ದು) ಹಾಗೂ ಕಟ್ಟಿಗೆಯನ್ನು ಕದ್ದು, ತಂದು ಕಾಮಣ್ಣ ಸುಡುವ ಜಾಗದಲ್ಲಿ ಸಂಗ್ರಹಿಸುತ್ತಾರೆ. ಸಂಜೆ ಆಗುತ್ತಿದ್ದಂತೆ ಒಂದೆಡೆ ಜಮಾವಣೆಗೊಂಡು ಭರ್ಜರಿ ಹಲಗೆ ಬಾರಿಸಿ ಸಂಭ್ರಮಿಸುತ್ತಾರೆ. ಯುವಕ- ಯುವತಿಯರಿಗಾಗಿ ಜಾನಪದ ಹಾಡು, ಕುಣಿತ, ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗಿರುತ್ತದೆ. ಕೊನೆಯ ದಿನ ಸಾವಿರಾರು ಜನರ ಸಮ್ಮುಖದಲ್ಲಿ ರಾತ್ರಿ ಕಾಮದಹನ ಕಾರ್ಯಕ್ರಮ ನಡೆಯುತ್ತದೆ.

ಮನೆಯಲ್ಲಿ ಭರ್ಜರಿ ಭೋಜನ:

ಕಾಮದಹನ ಮಾಡಿದ ನಂತರ ಬೆಂಕಿಯನ್ನು ಮನೆಗೆ ತಂದು ಮನೆಯ ಮುಂದೆ ಆ ಬೆಂಕಿಯಲ್ಲಿ ಕಡಲೆ ಸುಟ್ಟುಕೊಂಡು ಎಲ್ಲರೂ ತಿನ್ನುವುದು ಹಬ್ಬದ ಮತ್ತೊಂದು ವಿಶೇಷ. ಹೊಯ್ಕೊಂಡ ಬಾಯಿಗೆ ಹೋಳಿಗೆ ಎಂಬಂತೆ ಹೋಳಿಹಬ್ಬಕ್ಕಾಗಿಯೇ ಹೆಂಗಳೆಯರು ಹೋಳಿಗೆ, ತುಪ್ಪ, ಪಾಯಸ, ಗೋದಿ ಹುಗ್ಗಿ, ಮೊಸರನ್ನ, ಮಜ್ಜಿಗೆ, ಚಪಾತಿ, ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ಭಕ್ಷ್ಯ ಭೋಜನ ಸಿದ್ಧಪಡಿಸುತ್ತಾರೆ. ಸ್ನಾನ ನಂತರದ ಮನೆಯ ಸದಸ್ಯರು ಸೇರಿ ಸಿಹಿ ಊಟ ಮಾಡುವುದು ಹೋಳಿಹಬ್ಬದ ಮತ್ತೊಂದು ವಿಶೇಷ.

ಬಣ್ಣದ ಸಿದ್ಧತೆ:

ಹೋಳಿ ಹುಣ್ಣಿಮೆಗೆ ಪ್ರಮುಖವಾದ ವಸ್ತುವೇ ಈ ಬಣ್ಣ. ಬಗೆಬಗೆಯ ಬಣ್ಣಗಳು ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಕ್ಕೆ ಇರಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಹೋಳಿ ಹುಣ್ಣಿಮೆಯ ಮೊದಲ ದಿನವಾದ ಭಾನುವಾರವೇ ಖರೀದಿಸಿಕೊಂಡು ಹೋಗುತ್ತಾರೆ. ಹಾಗಾಗಿ ಹುಣ್ಣಿಮೆಯ ಪೂರ್ವದಲ್ಲಿಯೇ ಬಣ್ಣದ ಮಾರಾಟ ಭರ್ಜರಿಯಾಗಿಯೇ ನಡೆಯುತ್ತದೆ. ₹10 ರಿಂದ ಹಿಡಿದು ₹400-500 ರ ವರೆಗೂ ಬಣ್ಣದ ಪ್ಯಾಕೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹರಕೆಯ ಕಾಮಣ್ಣನ ವೈಶಿಷ್ಟತೆ

ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಪ್ರತಿಷ್ಠಾಪಿಸಿರುವ ರತಿ-ಕಾಮಣ್ಣನಿಗೆ 145 ವರ್ಷಗಳ ಇತಿಹಾಸವಿದೆ. ಈ ಕಾಮಣ್ಣನಿಗೆ ಮಹಿಳೆಯರು, ಪುರುಷರು ಬೇಡಿಕೊಳ್ಳುತ್ತಾರೆ. ತಮ್ಮ ಬೇಡಿಕೆಯಂತೆ ಹರಕೆ ಈಡೇರಿತು ಎಂದರೆ ಬಾಸಿಂಗ್- ಕಂಕಣ ಭಾಗ್ಯಕ್ಕಾಗಿ, ತೊಟ್ಟಿಲು- ಸಂತಾನ ಭಾಗ್ಯಕ್ಕಾಗಿ, ಪಾದ- ಉದ್ಯೋಗಕ್ಕಾಗಿ, ಹಸ್ತ- ವಿದ್ಯಾಭ್ಯಾಸ ಮತ್ತು ಆಶೀರ್ವಾದಕ್ಕೆ ಮೀಸೆ ಮತ್ತು ಲಿಂಗದಕಾಯಿ- ಕುದುರೆ- ಆರೋಗ್ಯ ಭಾಗ್ಯಕ್ಕಾಗಿ, ಛತ್ರಿ- ವಾಸ ಭಾಗ್ಯಕ್ಕಾಗಿ ಹೀಗೆ ತಮ್ಮ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನು ತಂದು ಹರಕೆ ತೀರಿಸುತ್ತಾರೆ. ಹೀಗಾಗಿ ಇಲ್ಲಿ ಸ್ಥಾಪಿಸುವ ಕಾಮಣ್ಣನಿಗೆ ಇಷ್ಟಾರ್ಥ ಈಡೇರಿಸುವ ಕಾಮಣ್ಣ ಎಂದು ಖ್ಯಾತಿ ಬಂದಿದೆ. ಇದರೊಂದಿಗೆ ಇಲ್ಲಿನ ಕಮರಿಪೇಟೆ ಫ್ರೆಂಡ್ಸ್‌ ಸರ್ಕಲ್ ವತಿಯಿಂದ ಜ. 25ರಿಂದ 28ರ ವರೆಗೆ ರಂಗೋಲಿ, ಮೆಹಂದಿ, ಭರತನಾಟ್ಯ, ಮ್ಯಾಜಿಕ್‌ ಶೋ, ಒನ್‌ ಮಿನಿಟ್‌ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಶಾಂತರೀತಿಯಲ್ಲಿ ಹೋಳಿ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಅಗತ್ಯ ಪೊಲೀಸ್‌ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಬಂದೋಬಸ್ತಿಗಾಗಿ ಕಮೀಷನರೇಟ್‌ ವ್ಯಾಪ್ತಿಯಲ್ಲಿರುವ 3500 ಪೊಲೀಸರು, ಹೊರಗಡೆಯಿಂದ 1 ಸಾವಿರ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ. ಇದರೊಂದಿಗೆ 500 ಹೋಮ್‌ಗಾರ್ಡ್, 12 ಕೆಎಸ್‌ಆರ್‌ಪಿ ತುಕಡಿಗಳಿರಲಿವೆ. ಒಂದು ಕಮಾಂಡೋ ವಾಹನ ಮಹಾನಗರದಾದ್ಯಂತ ಸಂಚರಿಸಲಿದೆ. ಹು-ಧಾ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ 250 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೋಳಿ ಹಿನ್ನೆಲೆಯಲ್ಲಿ ಈಗಾಗಲೇ ಸಾರಾಯಿ ನಿಷೇಧ ಮಾಡಲಾಗಿದ್ದು, ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ವೇಳೆ ವಿಶೇಷ ಬೆಳಕಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಈಗಾಗಲೇ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಶಾಂತಿ ಸಭೆ ನಡೆಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದರು.

Share this article