ಹಗರಿಬೊಮ್ಮನಹಳ್ಳಿ: ಶೀಘ್ರದಲ್ಲಿ ಮುಂಗಾರು ಕರ್ನಾಟಕವನ್ನು ಪ್ರವೇಶಿಸಲಿದ್ದು, ವಾರದೊಳಗೆ ಜಲಾಶಯದ ಉಳಿದ ೨ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಇದೇ ಏ.೨೭ರಂದು ರೈತ ಸಂಘದ ನೇತೃತ್ವದಲ್ಲಿ ಹಗರಿಬೊಮ್ಮನಹಳ್ಳಿ ಬಂದ್ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಎಚ್ಚರಿಸಿದರು.
ಜಲಾಶಯದ ೧೦ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ೮ ಕ್ರಸ್ಟ್‌ಗೇಟ್ ಅಳವಡಿಸಿ ೨ ಗೇಟ್‌ಗಳ ಅಳವಡಿಕೆಗೆ ಮೀನಮೇಷ ಎಣಿಸುತ್ತಿರುವುದು ಅಕ್ಷಮ್ಯವಾಗಿದೆ. ೧೫ ದಿನಗಳಲ್ಲಿ ಮುಗಿಯಬೇಕಾಗಿರುವ ಜಲಾಶಯದ ಬಾಕಿ ೨ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿ ೬೦ ದಿನಗಳಿಂದ ಸ್ಥಗಿತಗೊಂಡಿದೆ. ಶಾಸಕ ನೇಮಿರಾಜ್ ನಾಯ್ಕ, ಜಲಾಶಯದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಸಹಿಸಲಿಕ್ಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮುಂಗಾರು ಹಂಗಾಮಿನಲ್ಲಿಯೇ ಕ್ರಸ್ಟಗೇಟ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳದ ಪರಿಣಾಮವಾಗಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ೨ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿದೆ. ಶಾಸಕ ನೇಮಿರಾಜ್ ನಾಯ್ಕ ಕಾಮಗಾರಿಗಾಗಿ ರೂ.೪ಕೋಟಿ ಅನುದಾನ ತರುವಾಗ ಪ್ರದರ್ಶಿಸುವ ಜವಾಬ್ದಾರಿಯನ್ನು ಬೇಗ ಕಾಮಗಾರಿ ಮುಗಿಸುವಲ್ಲಿ ವಿಸ್ತರಿಸದಿದ್ದರೆ ರೈತರ ಸಂಕಷ್ಟಕ್ಕೆ ಶಾಸಕರೇ ಕಾರಣರಾಗುತ್ತಾರೆ ಎಂದು ಆರೋಪಿಸಿದರು.ಸ್ಥಳದಲ್ಲಿಯೇ ಸಂಚಾರ ದೂರವಾಣಿಯ ಮೂಲಕ ತಹಸೀಲ್ದಾರ್ ಕವಿತಾ ಅವರನ್ನು ಸಂಪರ್ಕಿಸಿದ ಅವರು, ಕಾಮಗಾರಿ ಸ್ಥಗಿತವಾಗಿರುವುದು ಕೇವಲ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ಅಲ್ಲ. ಇಡೀ ತಾಲೂಕಿನ ಜನರ ಸಮಸ್ಯೆಯಾಗಿದೆ. ಕಾಮಗಾರಿ ಸ್ಥಗಿತಗೊಂಡಿರುವ ಪರಿಣಾಮವಾಗಿ ತಾಲೂಕಿನಲ್ಲಿ ಆಶಾಂತಿ ಮತ್ತು ಅರಾಜಕತೆಗೂ ಕಾರಣವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ನೋಟಿಸ್ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ ತಂಬ್ರಹಳ್ಳಿ, ಹುರಕಡ್ಲಿ ಶಿವಕುಮಾರ್, ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ, ಕುಮಾರ್ ಇದ್ದರು.