ಕನ್ನಡಪ್ರಭ ವಾರ್ತೆ ಮುದಗಲ್
ಶ್ರೀ ಸತ್ಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಬೆಳಗಿನಿಂದಲೇ ಗ್ರಾಮದಲ್ಲಿ ಧಾರ್ಮಿಕ ವಿಧಾನಗಳ ಮೂಲಕ ದೇವಿಯ ಮೂರ್ತಿಯನ್ನು ಗ್ರಾಮಕ್ಕೆ ಸ್ವಾಗತಿಸಿಕೊಂಡು, ಅತ್ಯಂತ ಸಂಭ್ರಮ ಸಡಗರದಿಂದ ಕುಂಭಗಳೊಂದಿಗೆ, ವಾದ್ಯದ ತಂಡಗಳ ಮೂಲಕ ದೇವಿ ಮೂರ್ತಿಯನ್ನು ಸಾರೋಟದಲ್ಲಿ ಇಟ್ಟುಕೊಂಡು ಪೂಜೆ ಸಲ್ಲಿಸಿ ದೇವಸ್ಥಾನದವರೆಗೆ ಮೆರವಣಿಗೆ ನೆರವೇರಿಸಲಾಯಿತು. ದೇವಸ್ಥಾನದ ಮೈದಾನದಲ್ಲಿ ಭೋವಿ ಸಮಾಜ ಬಾಂಧವರು ಸೇರಿ ಗ್ರಾಮದ ಜನಸ್ತೋಮ ಆವರಿಸಿತ್ತು. ಎಲ್ಲರಲ್ಲಿಯೂ ನಿಮರ್ಮಾಣಗೊಂಡಿದ್ದ ಸಂಭ್ರಮ ಹಬ್ಬದ ವಾತಾವರಣ ಸೃಷ್ಠಿಸಿತ್ತು.
ಸ್ವಚ್ಛ ಚಂಡಿಯಾಗದ ಧಾರ್ಮಿಕ ವಿಧಿ ವಿಧಾನಗಳನ್ನು ಸಮಾಜದ ಮುಖಂಡ ಸಿದ್ದು ವೈ ಬಂಡಿ ದಂಪತಿ ಪೂಜೆ ಸಲ್ಲಿಸಿದರು. ಆಚಾರ್ಯರಿಂದ ಮಂತ್ರ ಘೋಷಗಳು ಮೊಳಗಿದವು. ಎರಡು ಗಂಟೆಗಳ ಕಾಲ ಯಾಗದ ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಕೆ ಸೇರಿ ಸಂಜೆಯವರೆಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.ಎಲ್ಲ ಧಾರ್ಮಿಕ ವಿಧಿ ವಿಧಾನಗಳ ಸಾನ್ನಿಧ್ಯವನ್ನು ಶ್ರೀ ಅಮರನಾಥೇಶ್ವರ ಮಠ ಪೀಠಾಧೀಶ್ವರ ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜ, ಶ್ರೀ ಪಂಚದರ್ಶನಾಮ ಜುನಾ ಅಖಾಡ, ಹಿಮಾಲಯ ಪೀಠಾಧೀಶ್ವರ ಅನಂತ ವಿಭೂಷಣ ಮಹಾಮಂಡಲೇಶ್ವರ ಶಿವಾಂಗಿನಂದ ಗಿರಿಜಿ ಮಹಾರಾಜ ವಹಿಸಿದ್ದರು. ಈ ವೇಳೆ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು ಇದ್ದರು.