ಕನ್ನಡಪ್ರಭ ವಾರ್ತೆ ಮಡಿಕೇರಿ
ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ನಗರದಾದ್ಯಂತ ನೆಲದಾಳದ ವಿದ್ಯುತ್ ಕೇಬಲ್ ಅಳವಡಿಕೆಗೆ ಚಿಂತನೆ ಹರಿಸಲಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ತನ್ಮಯಿ ಎಂ.ಎನ್. ಅವರಿಗೆ ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕದ ಆದ್ಯತೆಯಾಗಿ ನಗರದಾದ್ಯಂತ ವಿದ್ಯುತ್ ಕೇಬಲ್ ನ್ನು ಅಂಡರ್ ಗ್ರೌಂಡ್ ಮೂಲಕ ಅಳವಡಿಸುವ ಚಿಂತನೆಯಿದೆ. ರಾಜ್ಯ ವಿದ್ಯುತ್ ಇಲಾಖೆಯ ಸಚಿವರಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ಮಡಿಕೇರಿಯಲ್ಲಿ ವರ್ಷದ 5-6 ತಿಂಗಳೂ ಮಳೆ ಬೀಳುವ ಹಿನ್ನಲೆಯಲ್ಲಿ ಮೂಲಸೌಲಭ್ಯಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಮೂಲಸೌಲಭ್ಯಕ್ಕೆ ಗಮನ ನೀಡಲಾಗುತ್ತದೆ. ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿಯೂ ಕಾಲು ಹಾದಿ ನಿರ್ಮಾಣದ ಯೋಜನೆ ಇನ್ನೇನು ಜಾರಿಯಾಗಲಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸಾ ಘಟಕ ಪ್ರಾರಂಭಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಮುಂದಾಗುತ್ತೇವೆ ಎಂದರು.ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ, ಜನಪ್ರತಿನಿಧಿಗಳ ಪ್ರಯತ್ನದೊಂದಿಗೆ ಸರ್ವ ಜನತೆಯ ಸಹಕಾರ ಕೂಡ ಅಗತ್ಯವಾಗಿದೆ. ಸ್ಟೋನ್ ಹಿಲ್ ನಲ್ಲಿ 5 ಕೋಟಿ ರು. ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕವು ಮಳೆಗಾಲದ ನಂತರ ಬಳಕೆಗೆೆ ಲಭಿಸಲಿದೆ. ಕ್ರೀಡಾಪಟುಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸೆಮಿ ಒಳಾಂಗಣ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು. ಮಡಿಕೇರಿಯನ್ನು ಭವಿಷ್ಯದ ಪೀಳಿಗೆಗೆ ಸುಂದರವಾಗಿಸುವ ಪಣವನ್ನು ಎಲ್ಲರೂ ತೊಡಬೇಕಾಗಿದೆ ಎಂದೂ ಶಾಸಕರು ಕರೆ ನೀಡಿದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮದನ್ ಮಾದಯ್ಯ, ಕಾರ್ಯದರ್ಶಿ ಕೆ.ಮಧುಕರ್, ವಲಯಾಧ್ಯಕ್ಷ ಕೆ.ಎಸ್. ನಟರಾಜ್, ಖಜಾಂಜಿ ಕೆ. ದಾಮೋದರ್ ಇದ್ದರು. ಪ್ರಮುಖರಾದ ಅಂಬೆಕಲ್ ನವೀನ್ ಕುಶಾಲಪ್ಪ, ಎಂ.ಎ.ನಿರಂಜನ್, ಪ್ರತಿಮಾ ರವಿ, ಡಿ.ಜೆ.ಕಿಶೋರ್, ಪ್ರಿಯಾ ನವೀನ್, ಕನ್ನಂಡ ಕವಿತಾ, ಮೋಹನ್ ಕುಮಾರ್, ಸತೀಶ್ ರಾಜ್, ರಾಗ, ಪ್ರಕೃತ್ತಿ, ಪ್ರೇಮಾಕೋಟಿ ನಿರ್ವಹಿಸಿದರು.ಪವರ್ ಮನ್ ಗಳಿಗೆ ಸನ್ಮಾನಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೇ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿಯ ಪವರ್ ಮನ್ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪವರ್ ಮನ್ ಗಳಾದ ಶಿವಣ್ಣ, ರತ್ನಯ್ಯ, ಮಂಜುನಾಥ್, ತಿಮ್ಮೇಗೌಡ, ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಪವರ್ ಮನ್ ರತ್ನಯ್ಯ, ಜನತೆಗೆ ವ್ಯತ್ಯಯವಾಗದಂತೆ ವಿದ್ಯುತ್ ಸಂಪರ್ಕ ನೀಡುವುದೇ ಪರವ್ ಮನ್ ಗಳಾಗಿ ನಮ್ಮ ಕರ್ತವ್ಯವಾಗಿದೆ. ಕೃತಜ್ಞತೆರಹಿತ ಈ ವೃತ್ತಿಯಲ್ಲಿ ನಮ್ಮ ಮನಸ್ಸಿನ ಸಮಾಧಾನಕ್ಕೆ ತಕ್ಕಂತೆ ಹಗಲಿರುಳೂ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವೃತ್ತಿಯಲ್ಲಿ ಜನರ ಹೊಗಳಿಕೆ, ತೆಗಳಿಕೆ, ಟೀಕೆಗಳನ್ನೂ ಸಮಾನಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದರು. ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಪವರ್ ಮನ್ ಗಳ ಕೆಲಸ ನಿಜಕ್ಕೂ ಕಠಿಣವಾಗಿದ್ದು, ಊಹೆಗೂ ನಿಲುಕದಂಥೆ ಕಠಿಣ ಸವಾಲುಗಳನ್ನು ಸ್ವೀಕರಿಸಿ ಕೊಡಗಿನಾದ್ಯಂತ ಪವರ್ ಮನ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ತಕ್ಕಂತೆ ಕೃತಜ್ಞತೆ ನಿರೀಕ್ಷಿಸದ ಈ ವೃತ್ತಿಯಲ್ಲಿ ಸಕ್ರಿಯರಾಗಿರುವ ಪವರ್ ಮನ್ ಗಳಿಗೆ ಕೊಡಗಿನ ಜನತೆ ಸದಾ ಅಬಾರಿಯಾಗಿರಬೇಕು ಎಂದೂ ಶಾಸಕ ಡಾ.ಮಂತರ್ ಗೌಡ ನುಡಿದರು. ಮೂಡ ಅಧ್ಯಕ್ಷ ಬಿ.ವೈ. ರಾಜೇಶ್ , ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್, ಅನಿಲ್ ಹೆಚ್.ಟಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಹಾಜರಿದ್ದರು.