ಮೇಯರ್‌ಗಿರಿ ಮೀಸಲಾತಿ ಬದಲಿಗೆ ಕೋರ್ಟ್‌ ಮೊರೆ!

KannadaprabhaNewsNetwork |  
Published : Jun 10, 2025, 12:29 PM IST
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ. | Kannada Prabha

ಸಾರಾಂಶ

ಪಾಲಿಕೆಯ 3ನೆಯ ಅವಧಿಗೆ ಮೇಯರ್‌ ಆಗಿರುವ ರಾಮಪ್ಪ ಬಡಿಗೇರ ಅವರ ಅಧಿಕಾರ ಅವಧಿಗೆ ಜೂ. 28ಕ್ಕೆ ಮುಕ್ತಾಯಗೊಳ್ಳಲಿದೆ. ಈ ವಿಷಯವನ್ನು ಪಾಲಿಕೆ ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದುಂಟು. ಹೀಗಾಗಿ ನಾಲ್ಕನೆಯ ಅವಧಿಯ ಮೇಯರ್‌- ಉಪಮೇಯರ್‌ ಚುನಾವಣೆಗೆ ದಿನಾಂಕ ನಿಗದಿಯನ್ನು ಪ್ರಾದೇಶಿಕ ಆಯುಕ್ತರು ಮಾಡಬೇಕಿದೆ. ಇನ್ನೊಂದು ವಾರದಲ್ಲಿ ದಿನಾಂಕ ಘೋಷಣೆ ಕೂಡ ಆಗುವ ಸಾಧ್ಯತೆ ಉಂಟು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ನಾಲ್ಕನೆಯ ಅವಧಿಯ ಮೇಯರ್‌- ಉಪಮೇಯರ್‌ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿ ಚುನಾವಣೆಗೆ ಸಣ್ಣದಾಗಿ ಸಜ್ಜಾಗುತ್ತಿದೆ. ಈ ನಡುವೆ ನಾಲ್ಕನೆಯ ಅವಧಿಯ ಮೀಸಲು ಬದಲಾಯಿಸಿ ಎಂದು ಆಡಳಿತ ಪಕ್ಷದ ಇಬ್ಬರು ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದಾರೆ. ಹೀಗಾಗಿ ಮೇಯರ್‌ಗಿರಿಗೆ ಲಾಬಿ ನಡೆಸುತ್ತಿರುವವರಲ್ಲಿ ಢವ ಢವ ಶುರುವಾಗಿದೆ.

ಏನಿದು, ಏಕೆ ಕೋರ್ಟ್‌?: ಪಾಲಿಕೆಯ 3ನೆಯ ಅವಧಿಗೆ ಮೇಯರ್‌ ಆಗಿರುವ ರಾಮಪ್ಪ ಬಡಿಗೇರ ಅವರ ಅಧಿಕಾರ ಅವಧಿಗೆ ಜೂ. 28ಕ್ಕೆ ಮುಕ್ತಾಯಗೊಳ್ಳಲಿದೆ. ಈ ವಿಷಯವನ್ನು ಪಾಲಿಕೆ ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದುಂಟು. ಹೀಗಾಗಿ ನಾಲ್ಕನೆಯ ಅವಧಿಯ ಮೇಯರ್‌- ಉಪಮೇಯರ್‌ ಚುನಾವಣೆಗೆ ದಿನಾಂಕ ನಿಗದಿಯನ್ನು ಪ್ರಾದೇಶಿಕ ಆಯುಕ್ತರು ಮಾಡಬೇಕಿದೆ. ಇನ್ನೊಂದು ವಾರದಲ್ಲಿ ದಿನಾಂಕ ಘೋಷಣೆ ಕೂಡ ಆಗುವ ಸಾಧ್ಯತೆ ಉಂಟು.

ನಾಲ್ಕನೆಯ ಅವಧಿಯ ಮೇಯರ್‌ - ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್‌- ಒಬಿಸಿ ಸಾಮಾನ್ಯಕ್ಕೆ ಮೀಸಲಾಗಿದೆ. ಬಿಜೆಪಿಯಲ್ಲಿ ಮೇಯರ್‌ಗಿರಿಯನ್ನು ಒಂದು ಸಲ ಧಾರವಾಡಕ್ಕೆ ಕೊಟ್ಟರೆ, ಒಂದು ಬಾರಿ ಹುಬ್ಬಳ್ಳಿಗೆ ಕೊಡಲಾಗುತ್ತದೆ. ಹಾಗೆ ನೋಡಿದರೆ ಪಾಲಿಕೆಯ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಪಶ್ಚಿಮ, ಧಾರವಾಡ ಗ್ರಾಮಾಂತರ ಹಾಗೂ ಹು- ಧಾ ಸೆಂಟ್ರಲ್‌ ಕ್ಷೇತ್ರಕ್ಕೆ ಈಗಾಗಲೇ ಮೇಯರ್‌ಗಿರಿ ನೀಡಿದ್ದು ಆಗಿದೆ. ಪೂರ್ವ ಕ್ಷೇತ್ರಕ್ಕೆ ನೀಡುವುದು ಬಾಕಿಯಿದೆ. ಹೀಗಾಗಿ ನಾಲ್ಕನೆಯ ಅವಧಿಯ ಮೇಯರ್‌ಗಿರಿಯ ಪೂರ್ವ ಕ್ಷೇತ್ರಕ್ಕೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಇದಕ್ಕಾಗಿ ಲಾಬಿ ಕೂಡ ಬಲು ಜೋರಿನಿಂದಲೇ ನಡೆಯುತ್ತಿದೆ.

ಪೂರ್ವ ಕ್ಷೇತ್ರದ ಸದಸ್ಯರಾದ ಪ್ರೀತಿ ಖೋಡೆ, ಪೂಜಾ ಶೇಜವಾಡ್ಕರ್‌, ಶೀಲಾ ಕಾಟಕರ್‌ ರೇಸ್‌ನಲ್ಲಿದ್ದಾರೆ. ಇದಕ್ಕಾಗಿ ಲಾಬಿ ಕೂಡ ಬಲು ಜೋರಿನಿಂದಲೇ ನಡೆಯುತ್ತಿದೆ. ಈ ಮೂವರು ಮೊದಲ ಬಾರಿಗೆ ಸದಸ್ಯರಾದವರು. ಈ ನಡುವೆ ಇದೇ ಪೂರ್ವ ಕ್ಷೇತ್ರದ ಹಿರಿಯ ಸದಸ್ಯರಾದ ಮಾಜಿ ಮೇಯರ್‌ ರಾಧಾಬಾಯಿ ಸಫಾರೆ ಅವರನ್ನು ಮಾಡಿದರೆ ಒಳಿತು ಎಂಬ ಮಾತು ಕೇಳಿ ಬರುತ್ತಿದೆ.

ಕೋರ್ಟ್‌ಗೆ ಮೊರೆ: ನಾಲ್ಕನೆಯ ಅವಧಿ ಮೇಯರ್‌ಗಿರಿ ಸಾಮಾನ್ಯ ಮಹಿಳೆಗೆ ನೀಡಿರುವುದನ್ನು ಪ್ರಶ್ನಿಸಿ ಆಡಳಿತ ಪಕ್ಷದ ಇಬ್ಬರು ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದಾರೆ. ಸಾಮಾನ್ಯ ಮಹಿಳೆಗೆ ನೀಡಿರುವ ಮೀಸಲಾತಿ ಬದಲಿಸಿ ಸಾಮಾನ್ಯಕ್ಕೆ ನೀಡಬೇಕು ಎಂಬ ಬೇಡಿಕೆ ಇವರದು. ಬೆಳಗಾವಿ, ಮಂಗಳೂರು ಪಾಲಿಕೆಯಲ್ಲಿ 3 ಅವಧಿಗೆ ಸಾಮಾನ್ಯ ಮೀಸಲಾತಿ ನೀಡಲಾಗಿದೆ. ವಿಜಯಪುರ, ಬಳ್ಳಾರಿ ಅಂಥ ಸಣ್ಣ ಪಾಲಿಕೆಯಲ್ಲೂ 2 ಅವಧಿಗೆ ಸಾಮಾನ್ಯ ಮೀಸಲಾತಿಯೇ ಇದೆ. ಆದರೆ, ರಾಜ್ಯದ ಎರಡನೆಯ ದೊಡ್ಡ ಮಹಾನಗರ ಎನಿಸಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇರುವುದು ಒಂದೇ ಬಾರಿ ಮಾತ್ರ.

ಪಾಲಿಕೆಯ 5 ವರ್ಷದಲ್ಲಿ ಮೊದಲ ವರ್ಷ (ಅವಧಿ) ಸಾಮಾನ್ಯ ಮೀಸಲಾತಿ ಬಂದಿತ್ತು. ಆಗ ಈರೇಶ ಅಂಚಟಗೇರ ಮೇಯರ್‌ ಆಗಿದ್ದರು. 2ನೆಯ ಅವಧಿ ಸಾಮಾನ್ಯ ಮಹಿಳೆಗೆ ಮೀಸಲಾಗಿ ವೀಣಾ ಬರದ್ವಾಡ ಅಧಿಕಾರ ನಡೆಸಿದ್ದರು. 3ನೆಯ ಅವಧಿ ಅಂದರೆ ಹಾಲಿ ಅವಧಿಗೆ ಒಬಿಸಿಗೆ ಮೀಸಲಾಗಿದೆ. ರಾಮಪ್ಪ ಬಡಿಗೇರ್‌ ಆಗಿದ್ದಾರೆ. ಇವರ ಅಧಿಕಾರವಧಿ ಜೂ. 28ರ ವರೆಗೆ ಇದೆ. ಇನ್ನು ನಾಲ್ಕನೆಯ ಅವಧಿಯೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 5ನೆಯ ಅವಧಿ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಹೀಗಾಗಿ 5 ವರ್ಷದಲ್ಲಿ ಸಾಮಾನ್ಯ- 1, ಸಾಮಾನ್ಯ ಮಹಿಳೆ 2, ಒಬಿಸಿ-1 ಹಾಗೂ ಎಸ್ಸಿ ಮಹಿಳೆ -1 ಹೀಗೆ ಮೀಸಲು ಪ್ರಕಟವಾಗಿದ್ದುಂಟು.

ಈ ಹಿಂದೆ ಕನಿಷ್ಠ ಎರಡು ಸಲವಾದರೂ ಸಾಮಾನ್ಯಕ್ಕೆ ಮೀಸಲಿರುತ್ತಿತ್ತು. ಅದೇ ರೀತಿ ಈ ಸಲ ಕೂಡ ಸಾಮಾನ್ಯಕ್ಕೆ 2 ಸಲ ಮೀಸಲಾತಿ ಪ್ರಕಟಿಸಬೇಕು. ಸಾಮಾನ್ಯ ಮಹಿಳೆ ಮೀಸಲು ಬದಲಿಸಿ ಸಾಮಾನ್ಯಕ್ಕೆ ನಿಗದಿ ಪಡಿಸಿ ಎಂದು ಬೇಡಿಕೆಯನ್ನಿಟ್ಟು ಕೋರ್ಟ್‌ಗೆ ಬಿಜೆಪಿಯ ಇಬ್ಬರು ಸದಸ್ಯರು ಮೊರೆ ಹೋಗಿದ್ದಾರೆ. ಇನ್ನೆರಡು ದಿನಗಳಲ್ಲಿ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಢವ ಢವ: ಈ ನಡುವೆ ಈಗ ಮೇಯರ್‌ಗಿರಿಗಾಗಿ ಲಾಬಿ ನಡೆಸುತ್ತಿರುವ ಮಹಿಳಾ ಸದಸ್ಯರು, ಅವರ ಗಂಡಂದಿರಲ್ಲಿ ಢವ ಢವ ಶುರುವಾಗಿದೆ. ಸಾಮಾನ್ಯ ಮಹಿಳೆ ಮೀಸಲಾತಿ ಬದಲಾಗಿ ಎಲ್ಲಿ ಸಾಮಾನ್ಯಕ್ಕೆ ಮೀಸಲಾತಿ ಆಗುತ್ತದೆಯೋ? ಎಲ್ಲಿ ಕೈಗೆ ಬಂದ ತುತ್ತು ತಪ್ಪಿದಂತಾಗುತ್ತದೆ ಎಂಬ ಆತಂಕ ಶುರುವಾಗಿದೆ.

ಒಟ್ಟಿನಲ್ಲಿ ಮೇಯರ್‌ಗಿರಿಗಾಗಿ ನಾಲ್ಕನೆಯ ಅವಧಿಗೆ ಕುರಿತಂತೆ ರಾಜಕೀಯ ಗರಿಗೆದರಿರುವ ಜತೆಗೆ ಭಾರಿ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ