ದೇವನಹಳ್ಳಿ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಶಿಕ್ಷಕರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ತಾಪಂ, ತಾಲೂಕು ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿರುತ್ತವೆ. ಅವು ಶಿಕ್ಷಣದಲ್ಲಿ ಮುಂದುವರೆದ ಜಿಲ್ಲೆಗಳಾಗಿವೆ. ಆ ಸಾಲಿಗೆ ನಮ್ಮ ಜಿಲ್ಲೆಯು ಸೇರಬೇಕು. ನಮ್ಮ ಜಿಲ್ಲೆ ಕೂಡ ಶಿಕ್ಷಣದಲ್ಲಿ ಮುಂದುವರಿಯಬೇಕು.ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಣಕ್ಕೆ ಸರ್ಕಾರದಿಂದ ಬೇಕಾದ ಎಲ್ಲಾ ರೀತಿಯ ನೆರವು ನೀಡಲು ಸಿದ್ದರಿದ್ದೇವೆ. ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಅಂದಿನ ಕಾಲದಲ್ಲಿ ಶಿಸ್ತಿನ ಪಾಠ ಈಗಿನ ಕಾಲಕ್ಕೆ ಮಾದರಿ, ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದುವವರೇ. ಆದರೆ ಅವರು ನೀಡಿರುವ ಕೊಡುಗೆಗಳು, ಗುರುತುಗಳು ಅಜರಾಮರವಾಗಿರಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಗ್ರಗಣ್ಯ ದೇಶಗಳ ಜೊತೆಗೆ ನಮ್ಮ ದೇಶ ಬೆಳೆಯಬೇಕು. ಸಿಇಟಿ, ನೀಟ್ ನಂತಹ ಪರಿಕ್ಷೆಗಳಲ್ಲಿ ಸರ್ಕಾರಿ ಶಾಲೆ ಮಕ್ಕಳು ಪೈಪೋಟಿ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ದೇಶದ ಅಭಿವೃದ್ಧಿಗೆ ಅವರನ್ನು ಬೆಳೆಯುವಂತೆ ಮಾಡುವುದು ಶಿಕ್ಷಕರ ಕೈಯಲ್ಲಿದೆ ಎಂದರು.ರಾಜ್ಯಾದ್ಯಂತ ೫೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜಿಲ್ಲೆಯಲ್ಲಿ ೪ ರಿಂದ ೫ ಪಬ್ಲಿಕ್ ಶಾಲೆ, ಜೊತೆಗೆ ೧೦೧ ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನದಲ್ಲಿ ಸಿಎಸ್‌ಆರ್ ಅನುದಾನದಡಿ ಸರ್ಕಾರಿ ಮಾದರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಆಧುನಿಕ ಮೂಲ ಸೌಲಭ್ಯಗಳನ್ನು ಒಳಗೊಂಡಂತೆ ಕಾನ್ವೆಂಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿ ರಂಗಪ್ಪ ಮಾತನಾಡಿ, ಭಾರತ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ದೇಶ. ಅಂದಿನ ಕಾಲದಲ್ಲಿ ಅಕ್ಷರ ಸಂಸ್ಕೃತಿ ಎಲ್ಲರಿಗೂ ಸಿಗುತ್ತಿರಲಿಲ್ಲ, ಅಂತಹ ಸಮಯದಲ್ಲಿದ್ದ ಅನೇಕ ಸಂಪ್ರದಾಯಗಳು ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಸಮಾಜದಲ್ಲಿನ ಮಹಾನ್ ವ್ಯಕ್ತಿಗಳಾದ ಬುದ್ಧ, ಬಸವಣ್ಣ, ಜ್ಯೋತಿ ಭಾಫುಲೆ, ಸಾವಿತ್ರಿಬಾಯಿ ಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಅನಿಷ್ಠ ಪದ್ಧತಿಗಳನ್ನು ದಿಕ್ಕರಿಸಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು ಎಂದು ಹೇಳಿದರು.ನಮ್ಮ ದೇಶ ಮುನ್ನೆಲೆಗೆ ಬರಬೇಕೆಂದರೆ ಮೊದಲು ಶಿಕ್ಷಣ ಕ್ಷೇತ್ರದಲ್ಲಿ ಅಚ್ಚುಕಟ್ಟಾದ ಕೆಲಸ ಮಾಡಬೇಕು. ಆದ್ದರಿಂದ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ನೀಡಬೇಕು ಎಂಬುದನ್ನು ಶಾಸನ ಬದ್ದವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ೪೫ನೇ ವಿಧಿಯಲ್ಲಿ ಪರಿಚಯಿಸಿದರು. ಈ ರೀತಿಯ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರಿಗೆ, ದಲಿತರಿಗೆ, ಕಾರ್ಮಿಕರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಶಿಕ್ಷಣ ಸಿಕ್ಕಂತಾಯಿತು ಎಂದು ಹೇಳಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಆದ್ದರಿಂದ ಸತತ ಎರಡು ಬಾರಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಆದ್ದರಿಂದ ಶಿಕ್ಷಕರು ಅವರ ಆದರ್ಶಗಳನ್ನು ಪಾಲನೆ ಮಾಡಬೇಕು. ಶಿಕ್ಷಕರ ದಿನಾಚರಣೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಶಯಗಳಿಗೆ ನಿಜವಾದ ಅರ್ಥ ಸಿಗಬೇಕೆಂದರೆ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರುವ ಪೋಷಕರಿಗೆ ನಾವೆಲ್ಲರೂ ಸೇರಿ ಸರ್ಕಾರಿ ಶಾಲೆಗಳ ಮೇಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಕಳೆದ ಮೂರು ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ. ಎಷ್ಟೋ ಸರ್ಕಾರಿ ಶಾಲೆಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳಿದ್ದರೆ, ಇನ್ನೂ ಕೆಲವು ಶಾಲೆಗಳಲ್ಲಿ ಒಂದನೇ ತರಗತಿಗೆ ಒಂದು ಮಗು ಕೂಡ ಸೇರದಂತಾಗಿದೆ. ಮುಖ್ಯವಾಗಿ ಮಕ್ಕಳ ಕಲಿಯುವ ಕ್ರಮವನ್ನು ಅಧ್ಯಯನ ಮಾಡಿ ಬದಲಾಯಿಸಬೇಕು. ಈ ಕಾರ್ಯವನ್ನು ಕೇವಲ ಶಿಕ್ಷಕರು ಮಾತ್ರ ಮಾಡಲು ಸಾಧ್ಯ. ನೀವು ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳು ಎಂಬ ಭಾವನೆಯಿಂದ ಶಿಕ್ಷಣವನ್ನು ಧಾರೆಯರಿಯಬೇಕು. ಅದು ಒಂದಲ್ಲ ಒಂದು ದಿನ ಉತ್ತಮ ಫಲ ನೀಡುತ್ತದೆ. ಅಂದು ಮಕ್ಕಳು ನಿಮ್ಮನ್ನು ಪೂಜಿಸುತ್ತಾರೆ ಎಂದು ತಿಳಿಸಿದರು.ಇದೇ ವೇಳೆ ಜಿಲ್ಲೆಯ ೧೫ ಶಿಕ್ಷಕರಿಗೆ ಅತ್ಯುತ್ತಮ ಪ್ರಶಸ್ತಿ, ಒಬ್ಬರಿಗೆ ರಾಜ್ಯ ಪ್ರಶಸ್ತಿ, ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ರಾಜಣ್ಣ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಪಂ ಮಾಜಿ ಸದಸ್ಯ ಕೆ.ಸಿ ಮಂಜುನಾಥ್, ಬಯಪ ಸದಸ್ಯ ಪ್ರಸನ್ನಕುಮಾರ್, ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜು, ಕೆಪಿಸಿಸಿ ಸದಸ್ಯ ಎ.ಚಿನ್ನಪ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ದೇವನಹಳ್ಳಿ ತಹಸೀಲ್ದಾರ್ ಅನಿಲ್, ತಾಪಂ ಇಒ ಶ್ರೀನಾಥ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕರ ವೃಂದ, ಸಾರ್ವಜನಿಕರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ದೇವನಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ತಾಪಂ, ತಾಲೂಕು ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.