ಹಾನಗಲ್ಲ: ವಿನಯ ವಿದ್ಯೆಯನ್ನೊಳಗೊಂಡ ಯುವಕರು ವಿದ್ಯಾರ್ಥಿಗಳೆ ಈ ದೇಶದ ಸಂಪತ್ತು. ಸಾಧಕ ಸಮಾಜಮುಖಿ ಸತ್ವವನ್ನು ಯುವಕರಲ್ಲಿ ಜಾಗ್ರತಗೊಳಿಸಿದರೆ ಸತ್ಸಮಾಜ ನಿರ್ಮಾಣ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.
ತಾಲೂಕಿನ ಆಡೂರಿನ ಮಾಲತೇಶ ಸಭಾಭವನದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ತಾಲೂಕು ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂಕಗಳ ಉನ್ನತಿಯ ಜತೆಗೆ ಉತ್ತಮ ಸಂಸ್ಕಾರದ ಉನ್ನತ ಚಿಂತನೆ ನೀಡಬೇಕು. ಯುವಕರಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲ ಸಮಾಜಗಳು ಮಾರ್ಗದರ್ಶನ ಮಾಡುವ ಅನಿವಾರ್ಯ ಕಾಲದಲ್ಲಿ ನಾವಿದ್ದೇವೆ ಎಂದರು.ಸಾಮಾಜಿಕ ಕಾರ್ಯಕರ್ತ ಸಿದ್ದಲಿಂಗಪ್ಪ ಕಮಡೊಳ್ಳಿ ಮಾತನಾಡಿ, ಕಾಲಕಾಲಕ್ಕೆ ವಿದ್ಯಾರ್ಥಿ ಯುವಜನರನ್ನು ಪ್ರೋತ್ಸಾಹಿಸುವ ಪಾಲಕರು ಸಮಾಜದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಜಾತಿ, ಮತಗಳ ಹೆಸರಿನಲ್ಲಿ ಕಚ್ಚಾಡುವ ಬದಲು ನಮ್ಮ ಧಾರ್ಮಿಕ ಶ್ರದ್ಧೆ ಪ್ರೋತ್ಸಾಹಿಸಲು ಮುಂದಾಗೋಣ ಎಂದರು.
ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ಎಲ್ಲ ರಂಗಗಳು ವ್ಯಾಪಾರಿಕರಣದತ್ತ ಸಾಗುತ್ತಿವೆ. ದುಡ್ಡಿದ್ದವರನ್ನು ಬೆನ್ನಟ್ಟುವ ಮನೋಸ್ಥಿತಿ ಸರಿಯಲ್ಲ. ಎಲ್ಲ ಕಾಲದಲ್ಲೂ ದುಡ್ಡನ್ನು ಬೆನ್ನಟ್ಟುವ ಬಯಕೆ ಅಪಾಯಕಾರಿ. ಎಲ್ಲ ರಂಗಗಳು ಹಣವನ್ನೇ ಬೆನ್ನಟ್ಟಿದರೆ ಸಾಮಾಜಿಕ ಹಿತ ಕಡೆಗಣಿಸಿದಂತೆ ಎಂದರು.ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಮಾತನಾಡಿ, ಸಮಾಜದ ಯುವ ಜನತೆಗೆ ಉತ್ತಮ ಸಂಸ್ಕಾರ ದೇಶಭಕ್ತಿ ಜಾಗ್ರತಗೊಳಿಸುವ ಸಂಸ್ಕಾರ ಶಿಬಿರಗಳನ್ನು ಸಮಾಜ ನಡೆಸುತ್ತದೆ. ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಉನ್ನತಿಗಾಗಿ ಸಮಾಜದ ಮೂಲಕ ಪ್ರೋತ್ಸಾಹಿಸಲು ನಾವು ಬದ್ಧ ಎಂದರು.
ತಾಲೂಕಾಧ್ಯಕ್ಷ ಕರಿಬಸಪ್ಪ ಶಿವೂರ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಮಹೇಶ ಹಾವೇರಿ, ಮಲ್ಲಿಕಾರ್ಜುನ ಹಾವೇರಿ, ಎನ್.ಬಿ. ಪೂಜಾರ, ಬಸವಣ್ಣೆಪ್ಪ ಬೆಂಚಳ್ಳಿ, ಮಹದೇವಪ್ಪ ಭಾಗಸರ, ರಾಜಣ್ಣ ಬೆಟಗೇರಿ, ಅನಿತಾ ಶಿವೂರ, ವೀರೇಶ ಮತ್ತಿಹಳ್ಳಿ, ಭುವನೇಶ ಶಿಡ್ಲಾಪುರ, ಶಂಕ್ರಣ್ಣ ಬಿಸರಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಚಂದ್ರಣ್ಣ ನಿಕ್ಕಂ, ಬಸಣ್ಣ ಸೂರಗೊಂಡರ, ಎಚ್.ಎಚ್. ರವಿಕುಮಾರ, ಸಿ. ಮಂಜುನಾಥ ಉಪಸ್ಥಿತರಿದ್ದರು.ಸೋಮಶೇಖರ ಕೋತಂಬರಿ ಸ್ವಾಗತಿಸಿದರು. ಮಧು ಪಾಣಿಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಹಾನಗಲ್ಲ ತಾಲೂಕಿನ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.