ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

KannadaprabhaNewsNetwork |  
Published : Aug 27, 2025, 01:02 AM IST
ಜಿಲ್ಲಾಧಿಕಾರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಕುಮಟಾ ಕೈಗಾರಿಕಾ ವಸಾಹತುನಲ್ಲಿ ಬೀದಿ ದೀಪಗಳ ಸಮಸ್ಯೆ ಬಗೆಹರಿಸಿ, ಪ್ರತ್ಯೇಕ ಫೀಡರ್ ಅಳವಡಿಸುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಕಾರವಾರ: ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಕೈಗಾರಿಕೋದ್ಯಮಿಗಳ ವಿವಿಧ ಸಮಸ್ಯೆಗಳನ್ನು ಆದ್ಯತೆಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಕೈಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಇಲಾಖೆಯ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆ ಮತ್ತು ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾಂಡೇಲಿಯ ಕೈಗಾರಿಕಾ ವಸಾಹತುನಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ನೋಂದಣಿ ಮಾಡಲು ಇರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಒಂದು ತಿಂಗಳ ಒಳಗೆ ಸಂಬಂಧಪಟ್ಟ ಕೈಗಾರಿಕೋದ್ಯಮಿಗಳಿಗೆ ನಿವೇಶನಗಳನ್ನು ನೋಂದಣಿ ಮಾಡಿ ಕೊಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕುಮಟಾ ಕೈಗಾರಿಕಾ ವಸಾಹತುನಲ್ಲಿ ಬೀದಿ ದೀಪಗಳ ಸಮಸ್ಯೆ ಬಗೆಹರಿಸಿ, ಪ್ರತ್ಯೇಕ ಫೀಡರ್ ಅಳವಡಿಸುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಮನಗರ ಕೈಗಾರಿಕಾ ವಸಾಹತುನಲ್ಲಿರುವ ಘಟಕಗಳಿಗೆ ನೀರು ಪೂರೈಸುವ ಬಗ್ಗೆ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಬೇಕು ಎಂದರು.

ಜಿಲ್ಲೆಯ ಕೈಗಾರಿಕಾ ವಸಾಹತುಗಳಲ್ಲಿ ಈಗಾಗಲೇ ಹಂಚಿಕೆ ಮಾಡಲಾದ ಮಳಿಗೆಗಳಲ್ಲಿ ಇದುವರೆಗೆ ಚಟುವಟಿಕೆ ಆರಂಭಿಸದೇ ಇರುವ ಘಟಕಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಅವುಗಳನ್ನು ಅಗತ್ಯವಿರುವವರಿಗೆ ಮರು ಹಂಚಿಕೆ ಮಾಡುವಂತೆ ತಿಳಿಸಿ, ಹಂಚಿಕೆಯಾಗದೇ ಬಾಕಿ ಇರುವ ಮಳಿಗೆಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದರು.

ಕಾರವಾರದ ಮುಡಗೇರಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಮೋದನೆ ಮಾಡುವಂತೆ ತಿಳಿಸಿದರು. ಸಲ್ಲಿಕೆಯಾಗುವ ಪ್ರಸ್ತಾವನೆಗಳಲ್ಲಿ ಬದಲಾವಣೆಯ ಅಗತ್ಯವಿದ್ದಲ್ಲಿ ಅದನ್ನು ಅರ್ಜಿದಾರರಿಗೆ ತಿಳಿಸಿ ಸರಿಪಡಿಸಿ ಅನುಮೋದನೆ ನೀಡಿ. ಸಣ್ಣ ಪುಟ್ಟ ಕಾರಣಗಳಿಗೆ ಅರ್ಜಿಗಳನ್ನು ತಿರಸ್ಕರಿಸಬೇಡಿ ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಅರ್ಜಿ ಸಲ್ಲಿಸುವವರಿಗೆ ತಾವು ಕೈಗೊಳ್ಳುವ ಉದ್ದೇಶಿತ ಯೋಜನೆಯ ಬಗ್ಗೆ ಪ್ರಾಸ್ತಾವಿಕ ಯೋಜನಾ ವರದಿ ಸಲ್ಲಿಸುವ ಕುರಿತಂತೆ ಸೂಕ್ತ ಮಾಹಿತಿ ನೀಡುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಿಎಂ ವಿಶ್ವಕರ್ಮ ಯೋಜನೆ ಹಾಗೂ ಕೈಗಾರಿಕೋದ್ಯಮಿಗಳ ವಿವಿಧ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್ ಮತ್ತಿತರರು ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?