ಹುಬ್ಬಳ್ಳಿ:
ಬಿಜೆಪಿಯಲ್ಲಿ ಸುಳ್ಳು ಹೇಳುವ ಟ್ರೇನಿಂಗ್ ಕೊಡಲು ಒಂದು ಇನ್‌ಸ್ಟಿಟ್ಯೂಟ್ ಇದೆ. ಆ ಇನ್‌ಸ್ಟಿಟ್ಯೂಟ್‌ನಿಂದ ಕಲಿತು ಬಂದ ಗಿರಾಕಿ ಸಿ.ಟಿ. ರವಿ ಎಂದು ಲೇವಡಿ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೊಂಡುತನ ಬಿಟ್ಟು ರವಿ ಅವರು ಕ್ಷಮೆ ಕೇಳಬೇಕು ಎಂದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಅದಕ್ಕಾಗಿ ಒಂದು ಪ್ರತ್ಯೇಕ ಕೇಂದ್ರ, ಕ್ಲಾಸ್ ಇವೆ ಅಲ್ಲಿ. ಆ ಇನ್‌ಸ್ಟಿಟ್ಯೂಟ್ ಆರ್‌ಎಸ್‌ಎಸ್‌ನ ಒಂದು ಬ್ರ್ಯಾಂಚ್. ಅದು ನಾಗಪುರದಲ್ಲಿದೆ ಎಂದು ಟೀಕಿಸಿದರು.
ಬಿಜೆಪಿ ನಾಯಕರು ಸಿ.ಟಿ. ರವಿ ಅವರಿಗೆ ಕರೆದು ಬುದ್ಧಿ ಹೇಳುವುದನ್ನು ಬಿಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನ ಟ್ರೈನಿಂಗ್‌ನಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮಾತನಾಡಲು ಹೇಳಿದ್ದಾರಾ? ಇದೊಂದು ಟ್ರೈನಿಂಗ್ ಕ್ಯಾಂಪಾ? ಬಿಜೆಪಿ ಮಹಿಳಾ ಮೋರ್ಚಾದಲ್ಲಿರುವ ತಾಯಿಂದಿರೇ ಸಿ.ಟಿ. ರವಿಗೆ ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದರು.ರವಿ ಮಾತನಾಡಿದ್ದನ್ನು ಇಡೀ ಸದನವೇ ಕೇಳಿದೆ. ತಪ್ಪಾಗಿದೆ ಎಂದು ಕ್ಷಮೆ ಕೇಳಿ ಮುಂದುವರಿಯಬೇಕು ಅಷ್ಟೇ ಎಂದ ಅವರು, ಅದು ಬಿಟ್ಟು ನಾನು ಬೆಳಗಾವಿ ಪಾದಯಾತ್ರೆ ಮಾಡುತ್ತೇನೆ ಎನ್ನುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಿ.ಟಿ. ರವಿ ಅವರನ್ನು ಎನ್‌ಕೌಂಟರ್ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಹ್ಲಾದ ಜೋಶಿ ಅವರು ಹಿರಿಯರು. ಕೇಂದ್ರದಲ್ಲಿ ಸಚಿವರಾಗಿರುವರು. ಅವರಿಂದ ಇಂತಹ ಹೇಳಿಕೆ ಶೋಭೆ ತರುವುದಿಲ್ಲ. ಇದೇನು ಗುಜರಾತ್ ಅಥವಾ ಉತ್ತರ ಪ್ರದೇಶ ಅಂತ ತಿಳಿದುಕೊಂಡಿದ್ದೀರಾ ಜೋಶಿ ಅವರೇ? ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಎನ್‌ಕೌಂಟರ್ ಆಗುತ್ತವೆ. ಕಾಂಗ್ರೆಸ್ ಆಡಳಿತದಲ್ಲಿ ಅವುಗಳ ಅವಶ್ಯಕತೆ ಬೀಳಲ್ಲ ಎಂದರು.ಡಾ. ಬಿ.ಆರ್. ಅಂಬೇಡ್ಕರ್‌ಗೆ ಅಮಿತ್ ಶಾ ಮಾತನಾಡಿದ್ದು ಸರಿನಾ? ನಾವು ದೇವರ ಹೆಸರು ಹೇಳಿ ಸ್ವರ್ಗ ಸೇರಲ್ಲ. ನಾವು ಅಂಬೇಡ್ಕರ್ ಹೆಸರು ಹೇಳಿ ಭೂಮಿ ಮೇಲೆ ಇರುತ್ತೇವೆ. ಈ ದೇಶಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೊಡುಗೆ ಏನು? ಎಂದು ಪ್ರಶ್ನಿಸಿದರು.