ಈಶಾನ್ಯ ರಾಜ್ಯಗಳೊಂದಿಗೆ ಭಾವನಾತ್ಮಕ ಸಂವಹನ ಅಗತ್ಯ

KannadaprabhaNewsNetwork |  
Published : Nov 17, 2025, 02:15 AM IST
1 | Kannada Prabha

ಸಾರಾಂಶ

ಈಶಾನ್ಯ ರಾಜ್ಯಗಳಿಗೆ ಸರ್ಕಾರಗಳು ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮೂಲಕ ಬಲ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಈಶಾನ್ಯ ರಾಜ್ಯಗಳ ಅಧ್ಯಯನ ಯೋಗ್ಯ ವಿಚಾರಗಳೊಂದಿಗೆ ಭಾವನಾತ್ಮಕವಾಗಿ ಸಂವಹನ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗ (ಸಾಮರ್ಥ್ಯ ನಿರ್ಮಾಣ ಆಯೋಗ)ದ ಸದಸ್ಯ ಡಾ.ಆರ್. ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ನಗರದ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಲ್ಲಿ ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಕರ್ನಾಟಕ ಪ್ರಾಂತವು ಈಶಾನ್ಯ ರಾಜ್ಯಗಳ ಕೂಗು ವಿಷಯ ಕುರಿತು ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಶಾನ್ಯ ರಾಜ್ಯಗಳಿಗೆ ಸರ್ಕಾರಗಳು ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮೂಲಕ ಬಲ ನೀಡಬೇಕು. ಅಂತೆಯೇ ಸಮಾಜವು ಅವರನ್ನು ಭಾವನಾತ್ಮಕವಾಗಿ ಅರ್ಥೈಸಿಕೊಳ್ಳಬೇಕು. ಭಾರತದ ಮುಖವಾಣಿಯಂತಿರುವ ಈಶಾನ್ಯ ರಾಜ್ಯಗಳನ್ನು ನಾವು ವಿಶಾಲ ಹೃದಯದಿಂದ ನೋಡಬೇಕು ಎಂದರು.

ಈಶಾನ್ಯ ರಾಜ್ಯಗಳಲ್ಲಿ ಅಧ್ಯಯನ ಯೋಗ್ಯ ವಿಷಯಗಳು ಸಾಕಷ್ಟಿದೆ. ಈಶಾನ್ಯ ರಾಜ್ಯಗಳೆಂದರೆ ನೃತ್ಯ ಮತ್ತು ಸಂಗೀತವಷ್ಟೇ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅಲ್ಲಿನ ರಾಜಕೀಯ ಸ್ಥಾನ ಪಲ್ಲಟಗಳು, ವಿರಳ ಅಂತರ್ಜಾಲ ಸೌಲಭ್ಯ, ದುತ್ತನೆ ಮುಚ್ಚಿಕೊಳ್ಳುವ ರಸ್ತೆಗಳು ಕಾಣ ಸಿಗುತ್ತವೆ. ಈ ಎಲ್ಲದರ ನಡುವೆಯೂ ಅಲ್ಲಿನ ಜನ ಸುಂದರ ಬದುಕು ರೂಪಿಸಿಕೊಂಡಿದ್ದಾರೆ. ಪ್ರತಿ ಎರಡು ಕಿ.ಮೀ.ಗೆ ಭಾಷೆ, ಜನ ಜೀವನ, ಬಣ್ಣಗಳ ಪರಿವರ್ತನೆ ಇದೆ. ಅಷ್ಟು ವೈವಿಧ್ಯಮಯವಾಗಿದೆ. 800 ರಿಂದ 900 ತಳಿಗಳ ಅಕ್ಕಿಯನ್ನು ಬಳಸುತ್ತಾರೆ. ಈ ವೈವಿಧ್ಯತೆ ಇತರೆಡೆ ಕಾಣುವುದು ಅಸಾಧ್ಯ ಎಂದು ಅವರು ಹೇಳಿದರು.

ಈಶಾನ್ಯದ ರಾಜ್ಯಗಳನ್ನು ಪ್ರವಾಸದ ದೃಷ್ಟಿಯಿಂದಷ್ಟೇ ನೋಡದೆ, ಅಲ್ಲಿನ ಜನರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಸ್ವಾಮಿ ವಿವೇಕಾನಂದರ ತ್ಯಾಗ ಮತ್ತು ಸೇವೆಯ ಆದರ್ಶಗಳನ್ನು ಮುಂದಿಟ್ಟುಕೊಂಡು ಈಶಾನ್ಯದ ಬಗ್ಗೆ ಚರ್ಚಿಸಬೇಕಿದೆ. ವಿವೇಕಾನಂದರ ಅಮೇರಿಕಾ ಪ್ರವಾಸದ ಬಳಿಕ ಅಲ್ಲಿ ಸಾಮಾಜಿಕ ಪರಿವರ್ತನೆ ಆರಂಭವಾಯಿತು. ಆದರೆ ಅವರ ಕೊಡುಗೆಗಳನ್ನು ಬಿಚ್ಚಿ ನೋಡುವ ಭಾವನೆ ಇಲ್ಲದಾಗಿದೆ ಎಂದು ಅಮೇರಿಕಾದ ಲೇಖಕಿಯೊಬ್ಬರು ಬರೆಯುತ್ತಾರೆ. ನಮ್ಮ ದೇಶದಲ್ಲೂ ಅದೇ ಪರಿಸ್ಥಿತಿ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು ಈರುಳ್ಳಿ ಸಿಪ್ಪೆ ಇದ್ದಂತೆ, ಅವರ ಬಗ್ಗೆ ತಿಳಿಯುತ್ತಾ ಹೋದಂತೆ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಹುದಷ್ಟೆ. ಸಂಪೂರ್ಣ ಅರ್ಥೈಸಿಕೊಳ್ಳುವಿಕೆ ಅಸಾಧ್ಯ. ದೇಶಸೇವೆಯ ಮೂಲಕ ಅವರ ವಿಚಾರ ಅರಿಯಬೇಕು ಎಂದರು.

ಕಾರ್ಯಕ್ರಮವನ್ನು ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ನಿವೇದಿತಾ ಭಿಡೆ ಉದ್ಘಾಟಿಸಿದರು. ಸಂಸ್ಥಾನದ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಯದುವೀರ್ ಆನ್ ಲೈನ್ ಸಂದೇಶ ನೀಡಿದರು.

ವಿಜಯ ವಿಠಲ ಶಾಲೆ ವಿದ್ಯಾರ್ಥಿಗಳು ಮೇಘಾಲಯದ ಖಾಸಿ ಭಾಷೆಯ ಹಾಡು ಹಾಡಿದರು. ವಿದ್ಯಾರ್ಥಿನಿಯರು ಈಶಾನ್ಯ ರಾಜ್ಯದ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಿದರು.

PREV

Recommended Stories

ಸಹಕಾರಿ ರಂಗದ ಸಾಧನೆಗೆ ಸಂಘಟಿತ ಪ್ರಯತ್ನ ಅಗತ್ಯ: ಜಾಸ್ಮಿನ್ ಕಿಲ್ಲೆದಾರ
ಮೋದಿ ಅಭಿವೃದ್ಧಿಗೆ ಜನ ಬೆಂಬಲ: ಸುನಿಲ್‌ ಕುಮಾರ್‌