ಕಪ್ಪತ್ತಗುಡ್ಡದಲ್ಲಿ ಸಫಾರಿ ಜೀಪ್ ಆರಂಭಕ್ಕೆ ಸೂಚನೆ

KannadaprabhaNewsNetwork |  
Published : Jul 24, 2025, 12:49 AM IST
ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ₹804 ಕೋಟಿ ವೆಚ್ಚದಲ್ಲಿ ತಯಾರಿಸಿದ ನೀಲನಕ್ಷೆ ಅನುಸಾರದಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಸುದೀರ್ಘ ಸಭೆ ಜರುಗಿತು. ಕಪ್ಪತ್ತಗುಡ್ಡಕ್ಕೆ ಸಫಾರಿ ಜೀಪ್ ಆರಂಭಿಸಲು ಸಚಿವ ಎಚ್.ಕೆ. ಪಾಟೀಲ್ ಸೂಚನೆ ನೀಡಿದರು.

ಗದಗ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ₹804 ಕೋಟಿ ವೆಚ್ಚದಲ್ಲಿ ತಯಾರಿಸಿದ ನೀಲನಕ್ಷೆ ಅನುಸಾರದಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಸುದೀರ್ಘ ಸಭೆ ಜರುಗಿತು.

ಪ್ರಮುಖವಾಗಿ ಬಿಂಕದಟ್ಟಿ ಝೂನಲ್ಲಿ ಸಪಾರಿ ಜೀಪ್ ಆರಂಭಿಸುವ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಒದಗಿಸಿದ ಪುರಾತತ್ವ ಕ್ಷೇತ್ರಗಳ ಸಂರಕ್ಷಣೆ ಮತ್ತು ಪುನರುಜ್ಜೀವ ಕುರಿತು, ಲಕ್ಕುಂಡಿ ಅಭಿವೃದ್ಧಿಯ ಕುರಿತು ಮತ್ತು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕುರಿತು ವಿಸ್ಕೃತ ಚರ್ಚೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಲಕ್ಕುಂಡಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಪ್ರವಾಸಿಗರು ಸಂಚರಿಸುವ ಮಾರ್ಗದ ನೀಲನಕ್ಷೆ ತಯಾರಿಸುವುದು ಸೂಕ್ತ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಬಜೆಟ್‌ನಲ್ಲಿ ಘೋಷಣೆಯಂತೆ ರಾಜ್ಯದಲ್ಲಿ 10 ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ ₹50 ಕೋಟಿ ಅನುದಾನ ಮೀಸಲಿದೆ. ಬಜೆಟಿನ ₹5 ಕೊಟಿಯಲ್ಲಿ ಲಕ್ಕುಂಡಿಯಲ್ಲಿ ಮೂಲಭೂತ ಸೌಕರ್ಯ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿ ನೀಲನಕ್ಷೆ ತಯಾರಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಆದ್ಯತಾಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಲಕ್ಕುಂಡಿಯ ಕಾಶಿ ವಿಶ್ವನಾಥ ದೇವಾಲಯ ಹತ್ತಿರದಲ್ಲಿ ಪ್ರವಾಸಿಗರ ಮೂಲಭೂತ ಸೌಕರ್ಯಕ್ಕಾಗಿ ಭೂಮಿ ಲಭ್ಯತೆ ಮತ್ತು ಅನುದಾನ ಇದೆ. ಜತೆಗೆ ಗದಗ-ಕೊಪ್ಪಳ ಹೆದ್ದಾರಿಯಲ್ಲೂ ಮೂಲಭೂತ ಸೌಕರ್ಯ (ಶೌಚಾಲಯ) ನಿರ್ಮಾಣ ಮಾಡಬಹುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಲಕ್ಕುಂಡಿಯಲ್ಲಿ ಮಾಹಿತಿ ಫಲಕಗಳು ಮತ್ತು ಇತಿಹಾಸ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು 5 ಪುಸ್ತಕ ಪ್ರಕಟಣೆ, ಪುನರ್ ಮುದ್ರಣ, ಲಕ್ಕುಂಡಿ ಮಾಹಿತಿ ಕೈಪಿಡಿ ಮುದ್ರಣ ಮತ್ತು ಲಕ್ಕುಂಡಿಗೆ ಸಂಬಂಧಿಸಿದಂತೆ 10 ವಿಡಿಯೋಗಳ ನಿರ್ಮಾಣಕ್ಕೆ ₹89 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 50 ಲಕ್ಷ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದಷ್ಟು ಬೇಗ ಈ ಕಾರ್ಯವವನ್ನು ಆರಂಭಿಸಲು ಸಚಿವರು ಸೂಚಿಸಿದರು.

ಲಕ್ಕುಂಡಿಯಲ್ಲಿ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮತ್ತು ಪುನರುಜ್ಜೀವನ ಕುರಿತು 7ರಿಂದ 8 ಮನೆಗಳು ಸ್ಥಳಾಂತರ ಮಾಡಬೇಕಿದೆ. ಮನೆಗಳ ಮೌಲ್ಯವನ್ನು ಗುರುತಿಸಿ, ಪರಿಹಾರ ನೀಡಿ ಸ್ಥಳಾಂತರಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಲಕ್ಕುಂಡಿ ಜತೆಗೆ ಕಪ್ಪತ್ತಗುಡ್ಡದಲ್ಲಿ ಫುಡ್ ಕಾರ್ನರ್, ಸಫಾರಿ ಆರಂಭಿಸುವ ಮತ್ತು ಬಿಂಕದಕಟ್ಟಿ ಝೂನಲ್ಲಿ ನೈಟ್ ಸಫಾರಿ ಜೀಪ್ ಆರಂಭಿಸುವುದಕ್ಕೆ ಸಚಿವರು ಸೂಚಿಸಿದರು.

ಗೋವಾದಿಂದ ಗದಗ ಕೊಪ್ಪಳ ಮಾರ್ಗವಾಗಿ ಹಂಪಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಅಧಿಕವಿದೆ. ಹಾಗಾಗಿ ಲಕ್ಕುಂಡಿ ಸಮೀಪದ ಹೆದ್ದಾರಿ ಮಾರ್ಗದಲ್ಲಿ ನಾಮಫಲಕ ಅಳವಡಿಸಲು ಸೂಚಿಸಲಾಯಿತು. ಲಕ್ಕುಂಡಿ ಒಳ ಬರುವ ಮತ್ತು ಹೊರ ಹೋಗುವ ಹೆದ್ದಾರಿಯಲ್ಲಿ ಎರಡು ಪ್ರವೇಶದ್ವಾರಗಳು ನಿರ್ಮಾಣದ ವಿಷಯವೂ ಚರ್ಚೆ ಆಯಿತು. ಪ್ರವೇಶದ್ವಾರಗಳನ್ನು ಕಲ್ಲಿನ ಕಮಾನುಗಳ ಮೂಲಕ ನಿಮಿರ್ಸುವುದು ಸೂಕ್ತ ಎಂದು ಅಧಿಕಾರಿಗಳ ಒತ್ತಾಸೆ ಕೇಳಿ ಬಂದಿತು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಪ್ರವಾಸೋದ್ಯಮ ಅಭಿವೃದ್ಧಿ ಸಾಧಿಸಲು ರಚಿಸಲಾದ ಸಮಿತಿ ಸದಸ್ಯರಾದ ಜೆ.ಕೆ. ಜಮಾದಾರ, ಆರ್.ಆರ್. ಓದುಗೌಡರ, ವಿವೇಕಾನಂದಗೌಡ ಪಾಟೀಲ, ಗೀತಾಂಜಲಿ ರಾವ್‌, ಅ.ದ. ಕಟ್ಟಿಮನಿ, ಕಿಶೋರ್ ಬಾಬು ನಾಗರಕಟ್ಟೆ ಅವರು ಸಮಗ್ರವಾಗಿ ಚರ್ಚಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಕೆ.ವಿ. ರಾಜೇಂದ್ರಕುಮಾರ, ಜಿಪಂ ಸಿಇಒ ಭರತ್ ಎಸ್., ಎಸ್ಪಿ ರೋಹನ್ ಜಗದೀಶ, ಸಂತೋಷ ಕುಮಾರ, ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತ ಶ್ರೀನಿವಾಸ್, ಜಂಟಿ ನಿರ್ದೇಶಕ ಜನಾರ್ದನ, ಅರಣ್ಯ ವಸತಿ ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಸಂಖಿಮಠ, ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜ್, ಮಂಜುನಾಥ ಚವ್ಹಾಣ, ನಾಗರಾಜ ಹಂಪಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಸದಸ್ಯ ಸಿದ್ದು ಪಾಟೀಲ, ಅಶೋಕ ಮಂದಾಲಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ್ವರ ವಿಭೂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವೀರಯ್ಯಸ್ವಾಮಿ ಬಿ., ವಾರ್ತಾಧಿಕಾರಿ ವಸಂತ ಮಡ್ಲೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ