ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲೆಯ ಉಪವಿಭಾಗಾಧಿಕಾರಿಗಳ ಕೋರ್ಟುಗಳಲ್ಲಿ ಪಿಟಿಸಿಎಲ್‌ಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ಬಾಕಿ ಇದ್ದು, ಬಾಕಿಯಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಎಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಉಪವಿಭಾಗದಲ್ಲಿ 203, ಮಧುಗಿರಿ ಉಪವಿಭಾಗದಲ್ಲಿ 342 ಹಾಗೂ ತಿಪಟೂರು ಉಪವಿಭಾಗದಲ್ಲಿ 43 ಸೇರಿದಂತೆ ಒಟ್ಟು 588 ಪಿಟಿಸಿಎಲ್ ಪ್ರಕರಣಗಳು ಬಾಕಿಯಿದ್ದು, ವಿಳಂಬ ಮಾಡದೆ ಸಕಾಲದಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಆಂದೋಲನ ವೇಗವಾಗಿ ನಡೆಯುತ್ತಿದ್ದು, ಇನ್ನೂ ಯಾವುದಾದರೂ ದಾಖಲೆ ರಹಿತ ಜನವಸತಿ ಸಮೂಹಗಳು ಕಂದಾಯ ಗ್ರಾಮಗಳನ್ನಾಗಿ ಗುರುತಿಸದೇ ಉಳಿದಿದ್ದರೆ ಅಂತಹ ಗ್ರಾಮಗಳ ಮಾಹಿತಿಯನ್ನು ಸಹಾಯವಾಣಿ ಸಂಖ್ಯೆ 0816-೨)221400 ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.ಜಿಲ್ಲೆಯಲ್ಲಿರುವ ಹಟ್ಟಿ, ತಾಂಡಾ, ಮಜರೆ, ಇತ್ಯಾದಿ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ಹಕ್ಕು ದಾಖಲೆಗಳನ್ನು ನೀಡಬೇಕು. ಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ ಪ್ರದೇಶಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಒಟ್ಟು 522 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, 521 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ 472 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ, 8056 ಹಕ್ಕು ಪತ್ರಗಳನ್ನು ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.ಪ್ರಸ್ತುತ ಮೇ-2025ರ ನಂತರ ಎರಡನೇ ಹಂತದಲ್ಲಿ 562ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, ಇದರಲ್ಲಿ 407 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ 109 ಗ್ರಾಮಗಳು ಖಾಸಗಿ ಜಮೀನಿನಲ್ಲಿ ಇರುವುದರಿಂದ 2ಇ ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಹೊಸದಾಗಿ ಗುರುತಿಸಲಾದ ಕಂದಾಯ ಗ್ರಾಮಗಳ ಪೈಕಿ 20,000 ಹಕ್ಕು ಪತ್ರಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ನಂತರ ದರಖಾಸ್ತು ಪೋಡಿ ಪ್ರಕರಣಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಒಟ್ಟು 9,904ಪ್ರಕರಣಗಳು ತಹಸೀಲ್ದಾರರಿಂದ ಅನುಬಂಧ-1 ಅನುಮೋದನೆಯಾಗಿ ಅಳತೆ ಕೆಲಸಕ್ಕೆ ಕಳುಹಿಸಲಾಗಿದ್ದು, ಈ ಪೈಕಿ 5,051 ಅಳತೆ ಕಾರ್ಯ ಪೂರ್ಣಗೊಂಡು ಈಗಾಗಲೇ 1,829 ಪ್ರಕರಣಗಳು ದುರಸ್ತಿಯಾಗಿ ಪಹಣಿ ಸೃಜನೆ ಹಂತದಲ್ಲಿರುತ್ತವೆ. ಉಳಿದ ಪ್ರಕರಣಗಳು ದುರಸ್ತಿ ಪ್ರಕ್ರಿಯೆಯಲ್ಲಿರುತ್ತವೆ ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ವಿವಿಧ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಮತ್ತಿತರರು ಉಪಸ್ಥಿತರಿದ್ದರು.