ಹಾವೇರಿ: ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಬೇಕು. ಗೃಹಲಕ್ಷ್ಮಿ ಯೋಜನೆ ಹಣವು, ಮರಣ ಹೊಂದಿದವರ ಹಾಗೂ ಅನರ್ಹ ಫಲಾನುಭವಿಗಳಿಗೆ ಜಮೆಯಾಗುತ್ತಿರುವ ಕುರಿತು ದೂರುಗಳಿವೆ. ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸೂಚನೆ ನೀಡಿದರು.
ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿಗಳ ಜತೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಸಹ ಘೋಷಣೆ ಮಾಡಿದ್ದಾರೆ. ಈ ಎಲ್ಲ ಯೋಜನೆಗಳ ಸೌಲಭ್ಯಗಳು ನಿರ್ಗತಿಕರಿಗೆ ಹಾಗೂ ಕೆಳಹಂತದ ಜನರಿಗೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಪಂಚ ಗ್ಯಾರಂಟಿ ಸೌಲಭ್ಯ ಪಡೆದ ಫಲಾನುಭವಿಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು ತಿಳಿದುಕೊಳ್ಳಬೇಕು. ಅವರ ಯಶೋಗಾಥೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಗ್ಯಾರಂಟಿ ಅನುಷ್ಠಾನ ಸಮಿತಿಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಹಾಗೂ ಅನರ್ಹ ಫಲಾನುಭವಿಗಳ ಹಾಗೂ ಬೇರೆ ರಾಜ್ಯದವರು ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಕುರಿತು ಅಂಕಿ-ಸಂಖ್ಯೆ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ ಮಾತನಾಡಿ, ಜಿಲ್ಲೆಯಲ್ಲಿ 4,00,702 ಫಲಾನುಭವಿಗಳು ಗೃಹಲಕ್ಷ್ಮಿ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿದ್ದಾರೆ. ಬಹು ಬ್ಯಾಂಕ್ ಖಾತೆ ಹೊಂದಿದ 28,430 ಫಲಾನುಭವಿಗಳ ಕುರಿತು ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದ್ದು, ಈ ಕುರಿತು 193 ಖಾತೆಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಹಣದ ದುರುಪಯೋಗವಾಗಿಲ್ಲ. ಮರಣಹೊಂದಿದ ಫಲಾನುಭವಿಗಳ ಕುರಿತು ಪಡಿತರ ಚೀಟಿಯಲ್ಲಿ ಹೆಸರು ಕಡಿಮೆಯಾಗದ ಸಮಯದಲ್ಲಿ ಅಂತಹ ವ್ಯಕ್ತಿಗಳಿಗೆ ಹಣ ಜಮೆಯಾಗಿರುವುದು ಕಂಡುಬಂದಿದೆ. ಗೃಹಜ್ಯೋತಿ ಫಲಾನುಭವಿಗಳ ಮನೆ ಮನೆ ಭೇಟಿ ನೀಡಿ ಫಲಾನುಭವಿಗಳ ಪರಿಶೀಲನೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ವ್ಯಕ್ತಿಯ ಮರಣಗೊಂಡ 15 ದಿನಗಳಲ್ಲಿ ಮರಣ ಪ್ರಮಾಣಪತ್ರ ನೀಡುವಂತೆ ಪಿಡಿಒಗಳಿಗೆ ಸೂಚನೆ ನೀಡಲು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಉಪಾಧ್ಯಕ್ಷರು ನಿರ್ದೇಶನ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ಮರಗಡಿ, ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ವಸಂತ ಲಮಾಣಿ, ರಮೇಶ ಮಡಿವಾಳರ, ಲಲಿತಾ ಹುಗ್ಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್‌ಕುಮಾರ, ಉಪ ಕಾರ್ಯದರ್ಶಿ ಡಾ. ಪುನೀತ್ ಉಪಸ್ಥಿತರಿದ್ದರು.