ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿವಿಧ ಇಲಾಖೆ ಹಾಗೂ ನಿಗಮಗಳಡಿ ಅನುಷ್ಠಾನವಾಗುವ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳು ಬ್ಯಾಂಕುಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಬಾರದು. ಸರ್ಕಾರದಿಂದ ಶೇ.೨೫ ರಿಂದ ಶೇ. ೯೦ರವರೆಗೂ ಸಹಾಯಧನ ಸೌಲಭ್ಯ ನೀಡಿದ್ದರೂ ಸಾಲ ನೀಡದೆ ಫಲಾನುಭವಿಗಳನ್ನು ಕಾಯಿಸುವುದು ಸರಿಯಲ್ಲ. ಬರಗಾಲ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರು, ಬಡವರು, ಮಹಿಳೆಯರು, ನಿರ್ಗತಿಕರ ಅರ್ಜಿಗಳಿಗೆ ಆದ್ಯತೆ ಮೇಲೆ ಸಾಲ ಮಂಜೂರಾತಿ ನೀಡಬೇಕು ಎಂದು ಸೂಚಿಸಿದರು.ಕೆಲವು ರೈತರಿಗೆ ಸಾಲದ ಅರ್ಜಿಯೊಂದಿಗೆ ಬ್ಯಾಂಕಿಗೆ ಸಲ್ಲಿಸುವ ದಾಖಲೆಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಂತಹ ಮುಗ್ಧ ರೈತರಿಗೆ ದಾಖಲೆಗಳ ಸಲ್ಲಿಕೆ ಬಗ್ಗೆ ಇಲಾಖಾಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಇದರಿಂದ ದಾಖಲೆಗಳ ಕೊರತೆಯಿಂದ ಅರ್ಜಿ ತಿರಸ್ಕೃತವಾಗುವುದನ್ನು ತಡೆಯಬಹುದು. ಬ್ಯಾಂಕುಗಳಲ್ಲಿ ತಿರಸ್ಕೃತವಾದ ಸಾಲದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಮರು ಸಲ್ಲಿಕೆ ಮಾಡಲು ಸಂಬಂಧಿತ ಇಲಾಖೆಗಳು ಫಲಾನುಭವಿಗಳಿಗೆ ಸೂಚಿಸಬೇಕು. ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡದೆ ೩ ತಿಂಗಳಿಗೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುವ ಬ್ಯಾಂಕುಗಳ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರ್ಥಿಕ ವರ್ಷಾಂತ್ಯ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಆದಿ ಜಾಂಬವಂತ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡುವಲ್ಲಿ ಹಿನ್ನಡೆ ತೋರುವ ಬ್ಯಾಂಕುಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ)ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರಲ್ಲದೆ ಸಭೆಗೆ ಗೈರು ಹಾಜರಾದ ಬ್ಯಾಂಕಿನ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ ವಾರ್ಷಿಕ ಸಾಲ ಯೋಜನೆಯಡಿ ೪೩೮೮.೩೦ ಕೋಟಿ ರು.ಗಳ ಸಾಲ ನೀಡಲು ಗುರಿ ಹೊಂದಲಾಗಿತ್ತು. ಇದರಲ್ಲಿ ೨೭೧೮.೧೯ ಕೋಟಿ ರು.ಗಳ ಕೃಷಿ ಸಾಲ, ಕೃಷಿಗೆ ಪೂರಕವಾದ ಚಟುವಟಿಕೆಗಳಿಗಾಗಿ ೩೧೫.೩೨ ಕೋಟಿ ರು., ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ ೧೩೬೬.೭೩ ಕೋಟಿ ರು. ಹಾಗೂ ವ್ಯಾಪಾರ ಮತ್ತು ಸೇವೆಗಳಿಗಾಗಿ ೨೬೦.೯೬ ಕೋಟಿ ರು. ಸೇರಿದಂತೆ ೪೬೬೧.೨೦ ಕೋಟಿ ರು.ಗಳ ಸಾಲ ಒದಗಿಸಲಾಗಿದೆ ಈ ಪೈಕಿ ೪೬೬೧.೨೦ಕೋಟಿ ರು.ಗಳ ಸಾಲ ನೀಡುವ ಮೂಲಕ ಶೇ.೧೦೬ರಷ್ಟು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವುದರಿಂದ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮೂಲಕ ಜಮೆಯಾಗುವ ಯಾವುದೇ ಗ್ಯಾರಂಟಿ ಯೋಜನೆಗಳ ಹಣವನ್ನು ವಜಾ ಮಾಡದಂತೆ ಬ್ಯಾಂಕುಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಬಾರ್ಡ್‌ನ ಕೀರ್ತಿಪ್ರಭಾ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.