ಹೊನ್ನಾವರ: ಇಲ್ಲಿಯ ತಾಪಂ ಸಭಾಭವನದಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.ಸಭೆ ಪ್ರಾರಂಭದಲ್ಲೇ ಗರಂ ಆದ ಸಚಿವರು, ವ್ಯವಸ್ಥೆ ಬಗ್ಗೆ ಬೇಜಾರಾಗಿದ್ದೇನೆ. ಕೆಲವು ಇಲಾಖೆಯಲ್ಲಿ ಏಜೆಂಟರಿಂದ ಮಾತ್ರ ಕೆಲಸವಾಗುತ್ತಿದೆ ಎಂಬ ಮಾತುಕೇಳಿ ಬರುತ್ತಿದೆ. ಇದು ಎಲ್ಲ ಅಧಿಕಾರಿಗಳಿಗೂ ಕೊನೆಯ ಎಚ್ಚರಿಕೆ. ಕೆಲಸ ಮಾಡುವ ಮನಸ್ಸಿದ್ದರೆ ಇಲ್ಲೇ ಮುಂದುವರಿಯಿರಿ. ಇಲ್ಲ ನಾನೇ ನಿಮ್ಮನ್ನು ವರ್ಗಾಯಿಸಲು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ತಾಲೂಕಿನಲ್ಲಿ ೪೮ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ೮ ಅಂಗನವಾಡಿಗಳ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಐದಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖಾಧಿಕಾರಿ ತಿಳಿಸಿದರು.ಉಳಿದ 35 ಅಂಗನವಾಡಿಗಳಿಗೆ ತಕ್ಷಣದಲ್ಲೇ ಸ್ಥಳ ಗುರುತಿಸಬೇಕು. ಎಲ್ಲ ಇಲಾಖೆಗಳೂ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಸ್ಥಳಕ್ಕೆ ಸಹಕಾರ ನೀಡಬೇಕು ಎಂದು ಸಚಿವರು ಕಟ್ಟನಿಟ್ಟಾಗಿ ಸೂಚಿಸಿದರು. 40 ವರ್ಷಗಳಿಂದ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕೊಡಲಾಗದಿರುವುದು ನಾಚಿಕೆಗೇಡು ಎಂದು ಸಚಿವರು ಹೇಳಿದರು.
ಜೆಜೆಎಂ ಯೋಜನೆಯಡಿ ಕುಡಿಯುವ ನೀರನ್ನು ೨೦೨೪ ಮಾರ್ಚ್‌ನೊಳಗೆ ಕೊಡಬೇಕಿತ್ತು. 2026ರ ಮಾರ್ಚ್‌ಗೂ ಕೊಡುವುದು ಅನುಮಾನ. ನೀರಿನ ಮೂಲ ನೋಡಿಕೊಳ್ಳದೇ ಕೇವಲ ಪೈಪ್‌ಲೈನ್ ಹಾಕಿದ್ದೀರಿ. ಪೈಪ್‌ಲೈನ್ ಹಾಕಿದ ಎಲ್ಲ ಕಡೆ ಡಿಸೆಂಬರ್ ಒಳಗೆ ನೀರು ಕೊಡಬೇಕು ಎಂದು ಸಚಿವ ಮಂಕಾಳ ವೈದ್ಯ ಜೆಜೆಎಂ ಅಧಿಕಾರಿಗೆ ತಾಕೀತು ಮಾಡಿದರು.ನಮ್ಮ ಕ್ಲಿನಿಕ್‌ಗೆ ವಿಳಂಬ ಮಾಡದೇ ಕಟ್ಟಡ ಗುರುತಿಸಲು ಸಚಿವರು ಸೂಚಿಸಿದರು. ಹೊನ್ನಾವರ ಪಪಂ ವ್ಯಾಪ್ತಿಗೆ ಕರ್ಕಿ, ಹಳದೀಪುರ, ಮುಗ್ವಾ ಗ್ರಾಪಂಗಳನ್ನು ಸೇರ್ಪಡೆ ಮಾಡಿಕೊಂಡು ನಮ್ಮ ಕ್ಲಿನಿಕ್ ಆರಂಭಿಸುವಂತೆ ಸಲಹೆ ವ್ಯಕ್ತವಾಯಿತು.
ಮೀನುಗಾರ ಫಲಾನುಭವಿಗಳು ಹಳೇಕಾಲದಿಂದ ವಾಸ್ತವ್ಯ ಇರುವ ಜಾಗಕ್ಕೆ ಆರ್‌ಟಿಸಿ ಇಲ್ಲದಿದ್ದರೂ ಮನೆಗಳನ್ನು ಕೊಡಿ ಎಂದು ಮೀನುಗಾರಿಕೆ ಇಲಾಖಾಧಿಕಾರಿಗೆ ಸೂಚಿಸಿದರು.ತಾಲೂಕಿಗೆ ೮೫ ಫುಟ್ ಬ್ರಿಡ್ಜ್ ಅವಶ್ಯಕತೆ ಇರುವ ಬಗ್ಗೆ ಪಿಡಬ್ಲ್ಯುಡಿ ಇಲಾಖೆ ಚರ್ಚೆಯಲ್ಲಿ ಇಲಾಖಾ ಅಧಿಕಾರಿ ಎಂ.ಎಸ್. ನಾಯ್ಕ ಅವರು ತಿಳಿಸಿದರು. ಬಂದರು ಇಲಾಖೆಗೆ ಒಟ್ಟು ₹೨.೪೭ ಕೋಟಿ ಮಂಜೂರಾಗಿದೆ. ಕರ್ಕಿ ಗ್ರಾಮದ ಪಾವಿನಕುರ್ವಾಕ್ಕೆ ''''''''ಸೀವಾಲ್ '''''''' ನಿರ್ಮಾಣಕ್ಕೆ ಅನುದಾನ ಮಂಜೂರಾಗಿರುವ ಬಗ್ಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಮಂಗನಕಾಯಿಲೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿಲ್ಲ. ಅವರಿಗೆ ಸೂಕ್ತ ಪರಿಹಾರ ಅವಶ್ಯಕ. ಈ ಬಗ್ಗೆ ಪ್ರಸ್ತಾವನೆ ಕಳಹಿಸಿ ಸರ್ಕಾರ ಮಟ್ಟದಲ್ಲಿ, ಇಲಾಖಾ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.₹೧೦ ಕೋಟಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬಂದರು ಇಲಾಖೆ, ಮೀನುಗಾರಿಕೆ ಇಲಾಖೆಗಳು ಹೊನ್ನಾವರ ಬಂದರು ಪ್ರದೇಶದಲ್ಲಿ ಅಂಗಡಿ ಮಳಿಗೆ ಕಟ್ಟಿ ಈಗಾಗಲೇ ಅನಾದಿ ಕಾಲದಿಂದ ಅಲ್ಲಿರುವವರಿಗೆ ಬಾಡಿಗೆ ಕೊಡಬಹುದು ಎಂದು ಸಚಿವರು ಬಂದರು ಇಲಾಖಾಧಿಕಾರಿಗೆ ಸೂಚಿಸಿದರು.
ಶಿಕ್ಷಣ, ಅಕ್ಷರ ದಾಸೋಹ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.ತಹಸೀಲ್ದಾರ್ ಪ್ರವೀಣ ಕರಾಂಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಚೇತನಕುಮಾರ, ತಾಪಂ ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಉಪಸ್ಥಿತರಿದ್ದರು. ಕೆಡಿಪಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು. ಸುಧೀಶ ನಾಯ್ಕ ವಂದಿಸಿದರು.